ಮಂಗಳೂರು: ಕೌಟುಂಬಿಕ ಕಲಹದ ಕಾರಣ ಹೆಂಡತಿ ಮನೆ ಬಿಟ್ಟು ಹೋದ ವಿಚಾರಕ್ಕೆ ಕೋಪಗೊಂಡ ಪತಿಯೊಬ್ಬ ಮದುವೆ ಬ್ರೋಕರ್‌ನನ್ನೇ ಹತ್ಯೆ (Murderd) ಮಾಡಿದ ಘಟನೆ ನಡೆದಿದೆ.
ನಗರದ ಹೊರವಲಯದ ವಳಚಿಲ್‌ನಲ್ಲಿ ಗುರುವಾರ ರಾತ್ರಿ ಸುಲೇಮಾನ್ (50 ವರ್ಷ) ಎಂಬವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಘಟನೆಯಲ್ಲಿ ಸುಲೇಮಾನ್ ಅವರ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡಿದ್ದಾರೆ.
ಮುಸ್ತಫಾ (30 ವರ್ಷ) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಸುಲೇಮಾನ್, ವಿವಾಹ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಆರೋಪಿ ಮುಸ್ತಫಾ ಎಂಬಾತನಿಗೆ ಮಹಿಳೆಯೊಂದಿಗೆ ಸುಮಾರು 8 ತಿಂಗಳ ಹಿಂದೆ ವಿವಾಹ ಮಾಡಿಸಿದ್ದರು. ಆದರೆ, ವೈವಾಹಿಕ ಜೀವನದಲ್ಲಿ ಉಂಟಾದ ಕಲಹದಿಂದ ಮಹಿಳೆಯು ಎರಡು ತಿಂಗಳ ಹಿಂದೆ ತಮ್ಮ ತವರು ಮನೆಗೆ ಮರಳಿದ್ದರು.
ಇದರಿಂದ ಮುಸ್ತಫಾ ಮತ್ತು ಸುಲೇಮಾನ್ ನಡುವೆ ಒಡಕು ಉಂಟಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.