ದೊಡ್ಡಬಳ್ಳಾಪುರ: ಬಕ್ರೀದ್ (Bakrid) ಹಬ್ಬದ ಹಿನ್ನೆಲೆಯಲ್ಲಿ ನಗರದ ಖಾಸಗಿ ಕನ್ವೆನ್ಷನ್ ಹಾಲ್ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಶಾಂತಿಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಎಲ್ಲ ಧರ್ಮ, ಸಮುದಾಯದವರಿಗೆ ಅವರ ಹಬ್ಬಗಳನ್ನು ಸಂಭ್ರಮದಿಂದ ನಡೆಸಲು ಸ್ವತಂತ್ರರು. ಆದರೆ ನಾಗರೀಕರಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದು. ಹಬ್ಬದ ನೆಪದಲ್ಲಿ ಯಾವುದೇ ಸಮುದಾಯದವರು ಶಾಂತಿಭಂಗ ಉಂಟು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಪೊಲೀಸ್ ಇಲಾಖೆಗೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆ ಇರಬೇಕು ಎನ್ನುವುದೇ ಮುಖ್ಯ ದೇಯವಾಗಿದೆ. ಇವುಗಳಿಗೆ ದಕ್ಕೆಯುಂಟಾದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯ ಅಧ್ಯಕ್ಷೆ ವಹಿಸಿದ್ದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಾತನಾಡಿ, ಪ್ರಜಾಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ಎಲ್ಲಾ ಧರ್ಮದವರು ತಮ್ಮ ಹಬ್ಬಗಳನ್ನು ಆಚರಣೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಸಾರ್ವಜನಿಕರಿಗೆ ತೊಂದರೆಯಾದರೆ ಕ್ರಮ ಅನಿವಾರ್ಯವಾಗಲಿದೆ ಎಂದರು.
ಶಾಂತಿ ಸಭೆಯಲ್ಲಿ ಹಬ್ಬ ಆಚರಣೆ ಕುರಿತು ಮಾರ್ಗಸೂಚಿಗಳನ್ನು ತಿಳಿಸಲಾಯಿತು.
ಸಭೆಯಲ್ಲಿ ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರು, ವಿವಿಧ ಸಂಘಟನೆಗಳವರು ಭಾಗವಹಿಸಿದ್ದರು.
ತಹಶೀಲ್ದಾರ್ ವಿದ್ಯಾವಿಭಾರಾಥೋಡ್, ನಗರಸಭೆ ಪೌರಾಯುಕ್ತ ಕಾರ್ತೀಕೇಶ್ವರ್ ಹಾಗೂ ತಾಲ್ಲೂಕಿನ ಐದು ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ ಇದ್ದರು.