
ಬೆಂಗಳೂರು: ಇಸ್ರೇಲ್ (Israel) ಮತ್ತು ಇರಾನ್ (Iran) ನಡುವೆ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯು ಆ ದೇಶಗಳಲ್ಲಿ ನೆಲೆಸಿರುವ ವಿದೇಶಿಗರಿಗೆ ಆತಂಕ ಉಂಟು ಮಾಡಿದೆ.
ಈ ನಡುವೆ ಕರ್ನಾಟಕದ ಸುಮಾರು 9 ವಿದ್ಯಾರ್ಥಿಗಳು ಇರಾನ್ ದೇಶದ ರಾಜದಾನಿಯಾದ ತೆಹರಾನ್ ಸಮೀಪದಲ್ಲಿರುವ Shahid Behshti Medical Univerity ಯಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದು, ಉದ್ವಿಗ್ನ ಪರಿಸ್ಥಿತಿಯಿಂದಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.
ಈ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿಯಾದ ನದೀಮ್ ಹುಸೇನ್ ರವರು ಹಾಗೂ ಬೆಂಗಳೂರಿನಲ್ಲಿರುವ ಅವರ ಪೋಷಕರು ಅನಿವಾಸಿ ಭಾರತೀಯ ಸಮಿತಿ, ಬೆಂಗಳೂರು ಕಛೇರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ, ಅವರ ನೋವನ್ನು ತೋಡಿಕೊಂಡಿದ್ದು ಕೂಡಲೇ ದೇಶಕ್ಕೆ ಹಿಂದಿರುಗಲು ಇಚ್ಚೆಯನ್ನು ವ್ಯಕ್ತಪಡಿಸಿರುತ್ತಾರೆ.
ಇದಕ್ಕೆ ಸ್ಪಂದಿಸಿದ ಅನಿವಾಸಿ ಭಾರತೀಯ ಸಮಿತಿ, ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ರವರು ಕೂಡಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಇರಾನ್ನಯಲ್ಲಿ ನೆಲೆಸಿರುವ ರಾಜ್ಯದ ವಿದ್ಯಾರ್ಥಿಗಳನ್ನು ಕೂಡಲೇ ಕರೆತರಲು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿರುತ್ತಾರೆ.
ಅಲ್ಲದೇ ದೂರವಾಣಿ ಮುಖಾಂತರ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಖುದ್ದು ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						