ದೊಡ್ಡಬಳ್ಳಾಪುರ: ಭಾನುವಾರ ಸಂಜೆ ನಗರದಲ್ಲಿ ಸುರಿದ ಮಳೆಯಿಂದ ತಾಲೂಕು ಕಚೇರಿಯಿಂದ PLD ಬ್ಯಾಂಕ್ ಮೂಲಕ ಭಗತ್ ಸಿಂಗ್ ಕ್ರೀಡಾಂಗಣದವರೆಗಿನ ರಸ್ತೆಯಲ್ಲಿ ಚರಂಡಿ ನೀರು ಸರ್ಕಾರಿ ಶಾಲೆ ಆವರಣ, ಸೇರಿದಂತೆ ರಸ್ತೆಗೆ ನುಗ್ಗಿದ್ದರಿಂದ ರಸ್ತೆ ಹೊಳೆಯಂತಾಗಿತ್ತು.
ನಗರದ ಕಾಲುಭಾಗದ ಪ್ರದೇಶದಿಂದ ಹರಿದು ಬರುವ ಚರಂಡಿ ನೀರು ನಾಗರಕೆರೆಗೆ ಹರಿದು ಹೋಗಿ ಸೇರುವ ರಾಜ ಕಾಲುವೆಗಳು ಇರುವ ಚರಂಡಿಗಳಲ್ಲಿನ ಹೂಳು, ಪ್ಲಾಸ್ಟಿಕ್ ಸೇರಿ ಈ ಅವ್ಯವಸ್ಥೆಗೆ ಕಾರಣ ಎನ್ನಲಾಗಿದೆ.
ಈ ಪ್ರದೇಶದಲ್ಲಿ ಕನಿಷ್ಠ ವಾರಕ್ಕೆ ಒಮ್ಮೆಯಾದರು ಚರಂಡಿ ಸ್ವಚ್ಛಗೊಳಿಸಬೇಕಾದ ನಗರಸಭೆ ಅಧಿಕಾರಿಗಳು, ಅವರಿಗೆ ಸೂಚನೆ ನೀಡಬೇಕಾದ ಚುನಾಯಿತ ಜನಪ್ರತಿನಿದಿಗಳ ಬೇಜವಬ್ದಾರಿಯಿಂದಾಗಿ ಈ ಅವಾಂತರ ಸೃಷ್ಟಿಯಾಗುತ್ತಿದೆ ಎಂಬ ಆರೋಪ ವಾಹನ ಸವಾರರದ್ದಾಗಿದೆ.
ಏಕೆಂದರೆ ಮಳೆಯ ಆರಂಭಕ್ಕೆ ಮುನ್ನವೇ ಚರಂಡಿಗಳಲ್ಲಿ ತ್ಯಾಜ್ಯ ತೆರವು ಕಾರ್ಯ ಸಮರ್ಪಕವಾಗಿ ನಡೆಸಿದ್ದರೆ ಈ ಸ್ಥಿತಿ ಎದುರಾಗುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶ.
ಈಗಾಲಾದರೂ ಅಧಿಕಾರಿಗಳು ಹೆಚ್ಚೆತ್ತು ತ್ಯಾಜ್ಯ ತೆರವು ಕಾರ್ಯ ಮಾಡಿದಲ್ಲಿ ಮಳೆ ನೀರು, ಕೊಚ್ಚೆ ನೀರು ಹರಿದು ರಸ್ತೆ ಹಾಳಾಗುವುದು ಹಾಗೂ ಕೊಚ್ಚೆ ನೀರಿನಲ್ಲಿ ಹೋಗುವ ಬೈಕ್ ಸವಾರರು ಹಲವಾರು ಚರ್ಮ ರೋಗಗಳಿಗೆ ತುತ್ತಾಗುವುದು ತಪ್ಪಲಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ರಾಜಕೀಯ ಬಣ್ಣ ಪಡೆದುಕೊಂಡಿದೆ. ಅಲ್ಲದ ಇದೇ ನವ ದೊಡ್ಡಬಳ್ಳಾಪುರ.. ಹೆಚ್ಚು ಹಣ ಕೊಡುವರೆಂದು ಮತ ಮಾರಿಕೊಂಡರೆ ಈ ಪರಿಸ್ಥಿತಿ ಅನುಭವಿಸಬೇಕು ಎಂದು ವಿರೋಧ ಪಕ್ಷದ ಕಾರ್ಯಕರ್ತರು ಲೇವಡಿ ಮಾಡುತ್ತಿದ್ದಾರೆ.