ಗೌರಿಬಿದನೂರು: ಮೇಕೆದಾಟು ಯೋಜನೆ ಇದು ರೈತರ ಜೀವನದ ಪ್ರಶ್ನೆ. ಇದು ಕ್ರೆಡಿಟ್ ಗೇಮ್ ಪ್ರಶ್ನೆ ಅಲ್ಲ. ತಮಿಳುನಾಡು ಸರ್ಕಾರದ ಜೊತೆ ಕೂತು ಚರ್ಚೆ ಮಾಡಿ ಅನುಮತಿ ತರಲಿ. ಅವರಿಗೂ ಅಷ್ಟೇ ಜವಾಬ್ದಾರಿ ಇದೆ ಎಂದು ಡಿಕೆ ಶಿವಕುಮಾರ್ (D.K. Shivakumar) ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ವಾಗ್ದಾಳಿ ನಡೆಸಿದರು.
ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾಧ್ಯಮಗಳ ಜತೆ ಮಾತನಾಡಿದರು.
ನಮ್ಮ ನೀರು ನಮ್ಮ ಹಕ್ಕು ಅಂತ ಡಿ.ಕೆ ಶಿವಕುಮಾರ್ ಅವರು ಪಾದಯಾತ್ರೆ ಮಾಡಿದ್ರು. ಮೇಕೆದಾಟು ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡು ಸಿಎಂ ಜತೆ ಮಾತನಾಡಿ ಅನುಮತಿ ತರಲಿ ನೀರಾವರಿ ವಿಚಾರದಲ್ಲಿ ವಿಚಾರದಲ್ಲಿ ದೇವೇಗೌಡರು, ಕುಮಾರಣ್ಣ ಕ್ರೆಡಿಟ್ ಗೇಮ್ ಮಾಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ ಕಾರಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದಲ್ಲಿ ಕೆ.ಸಿ. ವ್ಯಾಲಿ ಹಾಗೂ ಎಚ್.ಎನ್. ವ್ಯಾಲಿ ನೀರನ್ನ ಎಷ್ಟೇ ಹಂತದಲ್ಲಿ ನೀವು ಶುದ್ಧೀಕರಣ ಮಾಡಿದ್ರು ಕೂಡ ಕೊಳಚೆ ನೀರನ್ನ ಗುಣಮಟ್ಟದ ನೀರಾಗಿ ಪರಿವರ್ತಿಸುವುದಕ್ಕೆ ಇಡೀ ವಿಶ್ವದಲ್ಲೇ ಯಾವ ತಂತ್ರಜ್ಞಾನವನ್ನ ತರುವುದಕ್ಕೆ ಆಗಿಲ್ಲ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರದ ಜಿಲ್ಲೆಯ ರೈತರು ಸ್ವಾವಲಂಬಿಗಳು. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆರೆಕಟ್ಟೆಗಳು ಮುಚ್ಚೋಗ್ತಿವೆ. ಮುಂದಿನ ದಿನಗಳಲ್ಲಿ ಎರಡು ಜಿಲ್ಲೆಯ ರೈತರ ಜೊತೆ ಸಮಾಲೋಚನೆ ನಡೆಸಬೇಕು. ಈ ಭಾಗದಲ್ಲಿ ನೀರಾವರಿ ತಜ್ಞರ ಜೊತೆ ಸಂವಾದ ನಡೆಸಬೇಕೆಂದು ತಿಳಿಸಿದರು.
ರೈತರ ವಿಚಾರದಲ್ಲಿ ಜೆಡಿಎಸ್ ಕೊಟ್ಟ ಮಾತು ತಪ್ಪಿಲ್ಲ, ಈ ಹಿಂದೆ ಕುಮಾರಣ್ಣ ರೈತರ ಸಾಲ ಮನ್ನಾ ಮಾಡಿದ್ರು, ಆದೇ ರೀತಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗದ ರೈತರಿಗೆ ಗುಣಮಟ್ಟದ ನೀರನ್ನ ಕಲ್ಪಿಸಬೇಕು. ಅದನ್ನ ಮುಂದಿನ ದಿನಗಳಲ್ಲಿ ಮಾಡ್ತೇವೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಆದರೆ ಈ ಭಾಗದ ರೈತರಿಗೆ ಗೌರವ ಸಿಗ್ತಿಲ್ಲ. ಬೆಂಗಳೂರಿನ ಕೊಳಚೆ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸಲಾಗುತ್ತಿದೆ. ಎರಡನೇ, ಮೂರನೇ ಹಂತದ ಶುದ್ದಿಕರಣ ಮಾಡ್ತೀವಿ ಅಂತ ಹೇಳ್ತಾರೆ ಆದರೆ, ಈ ನೀರಿನಿಂದ ಬೆಳೆ ಹಾಳಾಗುತ್ತಿದೆ, ಪರಿಸರ ಕಲುಶಿತವಾಗುತ್ತಿದೆ ಇದರಿಂದ ಅರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಿದರು.
ನಾನು ಒಂದು ಹುದ್ದೆಗೆ ಆಸೆಪಟ್ಟು ರಾಜ್ಯ ಪ್ರವಾಸ ಮಾಡುತ್ತಿಲ್ಲ. ಪಕ್ಷ ಸಂಘಟನೆ ಆಗಬೇಕು. ಯಾವ ಸ್ಥಾನದ ಬಗ್ಗೆ ಅಪೇಕ್ಷೆ ಇಲ್ಲ ನನಗೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆಯ ಸಂಪೂರ್ಣ ವಿಶ್ವಾಸ ಗಳಿಸುವುದರ ಮೂಲಕ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.