ಕೋಲಾರ: ಕಳೆದ ಎರಡು ವರ್ಷಗಳಿಂದ ಶಾಸಕರಿಗೆ ಸಿಗಬೇಕಾದ ಅನುದಾನಗಳನ್ನು ತಡೆ ಹಿಡಿಯುತ್ತಿದ್ದಾರೆ. ಆದ್ದರಿಂದ ಶಾಸಕರು ಹೋದಲ್ಲಿ ಬಂದಲ್ಲೆಲ್ಲಾ ಜನತೆ ಕಾಂಗ್ರೆಸ್ ಶಾಸಕರನ್ನೊಳಗೊಂಡಂತೆ ಎಲ್ಲರನ್ನೂ ಕೇಳುತ್ತಿದ್ದಾರೆ ಇದರಿಂದ ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.
ಕೋಲಾರದಲ್ಲಿ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಮಾತನಾಡಿರು.
ಯಾವುದೆ ಚುನಾವಣೆ ಇಲ್ಲದಿದ್ದರೂ ಶ್ರೀನಿವಾಸಪುರ ತಾಲ್ಲೂಕಿನ ಕಾರ್ಯಕರ್ತರು ಅದ್ದೂರಿಯಾಗಿ ನನ್ನನ್ನು ಬರಮಾಡಿಕೊಂಡಿದ್ದು ತುಂಬಾ ಸಂತೋಷವಾಯಿತು ಎಂದು ತಿಳಿಸಿದರು.
ರಾಜ್ಯದ ಉಪಮುಖ್ಯಮಂತ್ರಿ ಜೆಡಿಎಸ್ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಅನುದಾನ ಕೊಡುತ್ತೇವೆ ಎಂದು ಕರೆಸಿ ಅನುದಾನದ ಬಗ್ಗೆ ಹೊರೆತುಪಡಿಸಿ ಕುಮಾರಣ್ಣನ ಆರೋಗ್ಯದ ಬಗ್ಗೆ ಲೇವಡಿ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ನಿಖಿಲ್ ಕುಮಾರಸ್ವಾಮಿಯವರು ರಾಜ್ಯಾಧ್ಯಕ್ಷರಾಗುತ್ತಾರಂತೆ ಎಂದು ಕೇವಲವಾಗಿ ಮಾತನಾಡಿ ಪೊಟೋ ತೆಗೆದುಕೊಂಡು ಪ್ರಚಾರ ಮಾಡಿ ಕಳುಹಿಸಿದ್ದು ಹೊರೆತುಪಡಿಸಿದರೆ ಡಿಕೆ ಶಿವಕುಮಾರ್ ಅವರು ಯಾವುದೇ ಅನುದಾನ ಕೊಟ್ಟಿಲ್ಲ, ಇದು ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಎಂದು ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೋಡ್ ಮೂಲಕ ಬಂದಾಗ ರಸ್ತೆಗಳ ಬದಿಗಳಲ್ಲಿ ಮಾವಿನ ಹಣ್ಣನ್ನು ಚೆಲ್ಲಿರುವುದನ್ನು ನೋಡಿ ಮನಸ್ಸಿಗೆ ತುಂಬಾ ನೋವಾಯಿತು ಹಾಗೂ ಕುಮಾರಸ್ವಾಮಿಯವರು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಪರಿಹಾರಕ್ಕೆ ಒತ್ತಾಯ ಮಾಡಿದಾಗ ಕೇಂದ್ರ ಕೃಷಿ ಸಚಿವರು ಪರಿಹಾರ ಘೋಷಿಸಿದಾಗ ಮಾತ್ರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ, ಅಲ್ಲಿಯವರೆವಿಗೂ ರಾಜ್ಯ ಸರ್ಕಾರ ಮಾವು ಬೆಳೆಗಾರರ ಸಂಕಷ್ಟಕ್ಕೆ ಧಾವಿಸದೆ ನಿರ್ಲಕ್ಷ ತೋರಿತ್ತು ಎಂದು ಹೇಳಿದರು.
ಮೇಕೆದಾಟು ಯೋಜನೆ ಜಾರಿಗೆ ಜೆಡಿಎಸ್ ಪಕ್ಷದ ನಾಯಕರು ಸಂಪೂರ್ಣವಾಗಿ ಬೆಂಬಲಿಸಲು ಸಿದ್ದರಿದ್ದೇವೆ. ಕಾಂಗ್ರೆಸ್ ನಾಯಕರು ತಮಿಳುನಾಡಿನ ನಿಮ್ಮ ಮಿತ್ರ ಪಕ್ಷದ ನಾಯಕರೊಂದಿಗೆ ಅಣೆಕಟ್ಟಿಗೆ ಅನುಮತಿ ಕೊಡಿಸಿದರೆ ಕೇಂದ್ರ ಸರ್ಕಾರದಿಂದ ಕುಮಾರಣ್ಣನವರು ಎಲ್ಲಾ ರೀತಿಯ ಸೌಲಭ್ಯಗಳು ಒದಗಿಸಲಿದ್ದಾರೆ ಎಂದರು.
ಒಂದು ಕಾಲದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ತರಕಾರಿ ಮತ್ತು ಹಣ್ಣುಗಳು ಇಡೀ ದೇಶದಲ್ಲಿಯೇ ಉತ್ತಮ ಗುಣಮಟ್ಟದ್ದಾಗಿತ್ತು ಆದರೆ ಕೆಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ನೀರು ಜಿಲ್ಲೆಗೆ ಬಂದಾಗಿನಿಂದ ಜಿಲ್ಲೆಯಲ್ಲಿ ಬೆಳೆಯುವ ಹಣ್ಣು ತರಕಾರಿಗಳು ತಮ್ಮ ಗುಣಮಟ್ಟವನ್ನು ಕಳೆದುಕೊಂಡಿವೆ ಎತ್ತಿನ ಹೊಳೆ ಯೋಜನೆಯ ನೀರನ್ನು ಅವಳಿ ಜಿಲ್ಲೆಗಳಿಗೆ ಹರಿಸದೆ ಯೋಜನೆಯ ಹೆಸರಿನಲ್ಲಿ ಹಣ ಹೊಡೆದುಕೊಂಡು ಕುಳಿತಿದ್ದಾರೆ ಎಂದರು
ಚುನಾವಣೆಗೆ ಮೊದಲು ಪ್ರತಿ ತಿಂಗಳು ಜನತೆಗೆ ಗ್ಯಾರಂಟಿ ಯೋಜನೆಗಳು ಕೊಡುತ್ತೇವೆ ಎಂದು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದರು ಆದರೆ 4-5 ತಿಂಗಳು ಕಳೆದರೂ ಗ್ಯಾರಂಟಿ ಯೋಜನೆಗಳು ಜನತೆಗೆ ತಲುಪುತ್ತಿಲ್ಲ, ಈಗ ಕಾಂಗ್ರೆಸ್ ನಾಯಕರು ನಾವೇನು ಪ್ರತಿ ತಿಂಗಳು ಕೊಡುತ್ತೇವೆ ಎಂದು ಹೇಳಿಲ್ಲ, ಯಾವಾಗಲೋ ಕೊಡುತ್ತೇವೆ ತೆಗೆದುಕೊಳ್ಳಿ ಎಂದು ಉಡಾಫೆ ಉತ್ತರ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಲೋಕಸಭೆ ಚುನಾವಣೆ, ಉಪ ಚುನಾವಣೆ ಹಾಗು ಸ್ಥಳೀಯ ಸಂಸ್ಥೆ ಚುನಾವಣೆಗಳು ಹತ್ತಿರ ಬಂದಾಗ ಮಾತ್ರ ಜನರ ಖಾತೆಗಳಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಜನರನ್ನು ಮರಳು ಮಾಡಿ ಚುನಾವಣೆಗಳನ್ನು ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಆದರೆ ಜನ ಯಾವಾಗಲೂ ನಿಮ್ಮ ಆಟಗಳಿಗೆ ಮರಳಾಗುವುದಿಲ್ಲ ಜನರೂ ಎಚ್ಚೆತ್ತುಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.