ದೊಡ್ಡಬಳ್ಳಾಪುರ; ಕರ್ನಾಟಕ ಏಕೀಕರಣ ಚಳುವಳಿ ಮೂಲಕ ಕನ್ನಡ ನಾಡನ್ನು ಒಗ್ಗೂಡಿಸಿದವರು ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು (Alur Venkatarayaru) ಎಂದು ಹಿರಿಯ ಸಾಹಿತಿ ಶರಣಯ್ಯ ಹಿರೇಮಠ ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಆಲೂರು ವೆಂಕಟರಾಯರು ಜನ್ಮದಿನಾಚರಣೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಇತಿಹಾಸ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ, ಅಧ್ಯಯನಶೀಲರಾಗಿದ್ದ ಆಲೂರು ವೆಂಕಟರಾಯರು ಕನ್ನಡ ಸಾಹಿತಿಗಳಿಗೆ ಮತ್ತು ಅವರ ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹ ನೀಡಿದರು ಎಂದರು.
ಜಯಕರ್ನಾಟಕ ಪತ್ರಿಕೆಯ ಮೂಲಕ ದ.ರಾ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ ಜೋಷಿ ಮುಂತಾದ ಹಲವು ಸಾಹಿತಿಗಳಲ್ಲದೆ ಕನ್ನಡ ನಾಡಿನ ಎಲ್ಲಾ ಪ್ರದೇಶದ ಸಾಹಿತಿಗಳ ಸಾಹಿತ್ಯ ರಚನೆಗೆ ಸಹಕಾರ ನೀಡಿದರು.
ಆಲೂರು ವೆಂಕಟರಾಯರ ಬಹುಮುಖ ಪ್ರತಿಭೆ, ಕನ್ನಡ ಮತ್ತು ಕನ್ನಡಿಗರ ಬಗ್ಗೆ ಅವರಿಗಿದ್ದ ಕಾಳಜಿ, ಕಾರ್ಯಪ್ರವೃತ್ತಿ ಅನನ್ಯವಾದದ್ದು. ಇದರಿಂದಾಗಿ ಆಲೂರು ವೆಂಕಟರಾಯರನ್ನು ಕರ್ನಾಟಕದ ಪ್ರಾಣೋಪಾಸಕರು ಎಂದು ವರಕವಿ ದ.ರಾ.ಬೇಂದ್ರೆ ಕರೆದಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ಮಾತನಾಡಿ, ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದಾರೆ. ಕನ್ನಡ ಗ್ರಂಥಕರ್ತರ ಸಮ್ಮೇಳನ ನಡೆಸುವ ಮೂಲಕ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳನ್ನು ವಿಸ್ತಾರಗೊಳಿಸಿದರು.
ಕರ್ನಾಟಕ ಗತವೈಭವ ಸೇರಿದಂತೆ ಹಲವಾರು ಮಹತ್ವದ ಕೃತಿಗಳನ್ನು ಆಲೂರು ವೆಂಕಟರಾಯರು ರಚಿಸಿದ್ದಾರೆ. ಕರ್ನಾಟಕದ ಏಕೀಕರಣ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ ಎರಡು ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿಗಳಾದ ಪ್ರೊ.ಕೆ.ಆರ್.ರವಿಕಿರಣ್, ಎ.ಎಸ್. ಅಶ್ವತ್ಥಗೌಡ, ಕೋಶಾಧ್ಯಕ್ಷ ಡಾ.ಮುನಿರಾಜು, ಸಂಘಟನಾ ಕಾರ್ಯದರ್ಶಿ ರಾಜಘಟ್ಟ ರವಿ, ಪ್ರತಿನಿಧಿ ರಮೇಶ್ ಕುಮಾರ್, ನೆಲಮಂಗಲ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಪ್ರಕಾಶಮೂರ್ತಿ, ಗೌರವ ಕಾರ್ಯದರ್ಶಿ ಭಾನುಪ್ರಕಾಶ್, ದೊಡ್ಡಬಳ್ಳಾಪುರ ತಾಲ್ಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್, ಹೊಸಕೋಟೆ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ತಾವರೆಕೆರೆ ನಾಗರಾಜು, ಪ್ರತಿನಿಧಿಗಳಾದ ಮುನಿವೀರಪ್ಪ, ಮಾರ್ಕೊಂಡಪ್ಪ ಮುಂತಾದವರು ಭಾಗವಹಿಸಿದ್ದರು.