ಬೆಂಗಳೂರು; ಜಿಎಸ್‌ಟಿ (GST) ಅಡಿ ನೋಂದಣಿ ಮಾಡಿಕೊಳ್ಳದ, ವಾರ್ಷಿಕ 40 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಸಣ್ಣ ಅಂಗಡಿ ಮಾಲೀಕರಿಗೆ ಕೇಂದ್ರ ಸರ್ಕಾರದ ಜಿಎಸ್ಟಿ ತೆರಿಗೆಯ ಹೊರೆ ತಲ್ಲಣವನ್ನು ಸೃಷ್ಟಿಸಿದೆ.
ಹೌದು ಶೇ.1ರಷ್ಟು ತೆರಿಗೆ ಪಾವತಿಸಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆ ಸೂಚನೆ ನೀಡಿದೆ. ಇದರ ಅನ್ವಯ ಟೀ ಅಂಗಡಿ, ಬೇಕರಿ, ಹೋಟೆಲ್, ಚಿಕ್ಕಚಿಕ್ಕ ಅಂಗಡಿ ಮಾಲೀಕರು ಲಕ್ಷಾಂತರ ರೂ. ತೆರಿಗೆ ಪಾವತಿಸುವ ಅನಿವಾರ್ಯತೆ ಎದುರಾಗಿದೆ.
ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಕಲಂ 22ರ ಅನ್ವಯ ವಾರ್ಷಿಕ ಸರಕು ಪೂರೈಕೆದಾರರ ಸಮಗ್ರ ವಹಿವಾಟು 40 ಲಕ್ಷ ರೂ. ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು 20 ಲಕ್ಷ ರೂ. ಮೀರಿದರೆ ಜಿಎಸ್‌ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ.
2021-22 ರಿಂದ 2024-25ರ ಸಾಲಿನಲ್ಲಿ ಯುಪಿಐ (ಆನ್‌ಲೈನ್ ಪೇಮೆಂಟ್ ಆ್ಯಪ್) ಮೂಲಕ 40 ಲಕ್ಷ ರೂ. ಗೂ ಹೆಚ್ಚಿನ ಮೊತ್ತದ ವಹಿ ವಾಟು ನಡೆಸಿರುವ ಸಣ್ಣ ವರ್ತಕರು ಜಿಎಸ್‌ಟಿ ಅಡಿ ನೋಂದಣಿ ಮಾಡಿಕೊಳ್ಳದಿರುವುದು ಪತ್ತೆಯಾಗಿದೆ.
ಅಂತಹ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಲಕ್ಷಾಂತರ ರೂ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿರುವುದು ಆತಂಕವನ್ನು ತಂದೊಡ್ಡಿದೆ. ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರ ನೀಡಿ, ಸೂಕ್ತ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ.
ಹೀಗೆ ನೋಟಿಸ್ ಪಡೆದ ವರ್ತಕರು ಕೂಡಲೇ ಜಿಎಸ್‌ಟಿ ನೋಂದಣಿ ಪಡೆಯುವಂತೆಯೂ ಸೂಚಿಸಲಾಗಿದೆ. ಯುಪಿಐ, ನಗದು ಸೇರಿದಂತೆ ಒಟ್ಟಾರೆ ವಾರ್ಷಿಕ 40 ಲಕ್ಷ ರೂ.ನಿಂದ ಗರಿಷ್ಠ 1.5 ಕೋಟಿ ರೂ.ವರೆಗೆ ವಹಿವಾಟು ನಡೆಸುವ ಸಣ್ಣ ವರ್ತಕರು ಶೇ.1ರಷ್ಟು ತೆರಿಗೆ ಪಾವತಿಸಿ ಕೂಡಲೇ ಜಿಎಸ್‌ಟಿ ನೋಂದಣಿ ಪಡೆಯುವಂತೆ ಇಲಾಖೆ ನಿರ್ದೇಶಿಸಿದೆ.
ಈ ಕುರಿತ ಹೆಚ್ಚಿನ ಮಾಹಿತಿಗೆ www.gst.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.
ಆನ್ಲೈನ್ ಟ್ರಾನ್ಸಕ್ಷನ್ಗೆ ಬಹಿಷ್ಕಾರ
ಈ ಹಿನ್ನೆಲೆಯಲ್ಲಿ ಅಂಗಡಿ ಬಳಿ ಅಳವಡಿಸಿರುವ. UPI ಸ್ಟೀಕ್ಕರ್ಗಳಿಗೆ ಮಸಿ ಬಳಿಯುತ್ತಿದ್ದು ಆನ್ಲೈನ್ ಟ್ರಾನ್ಸಕ್ಷನ್ಗೆ ಬಹಿಷ್ಕಾರ ಮಾಡುತ್ತಿದ್ದಾರೆ. ನಿನ್ನೆ ಸಂಜೆಯಿಂದಲೇ ಅನೇಕ ಅಂಗಡಿಗಳ ವರ್ತಕರು ಪೋನ್ ಪೇ, ಗೂಗಲ್ ಪೇ ಮುಂತಾದ ಆನ್ಲೈನ್ ಪೇಮೆಂಟ್ ಆಪ್ ಬಳಕೆಗೆ ನಿರ್ಬಂಧ ಹೇರಿದ್ದು, ನಗದು ನೀಡಿದರೆ ಮಾತ್ರ ವಹಿವಾಟು ಎಂಬುದಾಗಿ ಹೇಳುತ್ತಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಹೆಸರೇಳಲು ಇಚ್ಚಿಸದ ವರ್ತಕರೋರ್ವರು, ಮೋದಿ ಅವರ ಮೇಲಿನ ಅಪಾರ ನಂಬಿಕೆಯಿಂದ ಆನ್ಲೈನ್ ವಹಿವಾಟು ಆರಂಭಿಸಿದ್ದೇವು. ಆದರೆ ಲಕ್ಷಾಂತರ ರೂ. ತೆರಿಗೆ ಕಟ್ಟುವಂತೆ ಚಿಕ್ಕಚಿಕ್ಕ ಅಂಗಡಿಗಳಿಗೆ ನೋಟಿ ನೀಡಿರುವುದು ಮಾಧ್ಯಮಗಳ ವರದಿ ನೋಡಿ ಭಯವಾಗುತ್ತಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕುರಿಯನ್ನು ಕೊಬ್ಬಿಸಿ, ಈಗ ಕತ್ತರಿಸಿದಂತಾಗಿದೆ ಬಡವರ ಪರಿಸ್ಥಿತಿ. ಚಿಕ್ಕ ಚಿಕ್ಕ ಅಂಗಡಿಗಳಿಗೆ ಲಕ್ಷಲಕ್ಷ ತೆರಿಗೆ ಎಂದರೆ ಕಥೆ ಏನು.? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.