ಬೆಂಗಳೂರು: ಇನ್ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯವಾಗಿದ್ದ ವಿವಾಹಿತ ಮಹಿಳೆಯೊಬ್ಬಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನಿಗೆ ಬುದ್ದಿ ಹೇಳಲು ಕರೆಸಿದ್ದ ವೇಳೆ, ವ್ಯಕ್ತಿಯೋರ್ವನ ಕೊಲೆಗೆ ಯತ್ನಿಸಿದ (Attempted murder) ಘಟನೆ ವರದಿಯಾಗಿದೆ.
ಆರೋಪಿಯನ್ನು ಪೊಲೀಸರ ಬಂಧಿಸಿದ್ದು, ಈ ಘಟನೆಯಲ್ಲಿ ಚಾಕುವಿನಿಂದ ಇರಿದು ಗಾಯಗೊಂಡ ವ್ಯಕ್ತಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಮಿಳುನಾಡಿನ ತಿರಪ್ಪತ್ತೂರು ಮೂಲದ ಸೆಲ್ವ ಕಾರ್ತಿಕ್‌ಗೆ ಇನ್ಸ್ಟಾಗ್ರಾಮ್ ನಲ್ಲಿ ಓರ್ವ ಮದುವೆಯಾದ ಮಹಿಳೆ ಜತೆಗೆ ಪರಿಚಯವಾಗಿತ್ತು. ದಿನಗಳು ಕಳೆಯುತ್ತಿದ್ದಂತೆ, ಕಾರ್ತಿಕ್ ಆಕೆಗೆ ಸಂದೇಶಗಳನ್ನು ಕಳುಹಿಸಿ, ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ, ಆಕೆ ಈಗಾಗಲೇ ವಿವಾಹಿತಳಾಗಿದ್ದಳು.
ಕಾರ್ತಿಕ್‌ನ ಸಂದೇಶಗಳಿಂದ ಕಿರಿಕಿರಿಗೊಳಗಾದ ಆಕೆ, ಈ ವಿಷಯವನ್ನು ತನ್ನ ಗಂಡನಿಗೆ ತಿಳಿಸದೆ, ತಂದೆಗೆ ಮಾತ್ರ ತಿಳಿಸಿದ್ದಳು.
ಮಗಳಿಂದ ಈ ವಿಷಯ ತಿಳಿದ ತಕ್ಷಣ, ಆಕೆಯ ತಂದೆ ಕಾರ್ತಿಕ್‌ನನ್ನು ಮಾತುಕತೆಗೆಂದು ಬೆಂಗಳೂರಿನ ಎಚ್‌ಎಎಲ್‌ಗೆ ಕರೆಸಿದ್ದರು. ಆದರೆ, ಮಾತುಕತೆಯ ಸಂದರ್ಭದಲ್ಲಿ ಕಾರ್ತಿಕ್, ಮಹಿಳೆಯ ಜತೆಗೆ ಮಾತನಾಡಬೇಕೆಂದು ಪಟ್ಟುಹಿಡಿದಿದ್ದಾನೆ.
ಈ ವೇಳೆ, ಆಕೆ ತಂದೆಯ ಸಂಬಂಧಿಯೊಬ್ಬನಾದ ಪ್ರಶಾಂತ್ನನ್ನು ಬೈಕ್‌ನಲ್ಲಿ ಕರೆದುಕೊಂಡು ಹೊರಟಿದ್ದಾನೆ.
ಕಾರ್ತಿಕ್‌ನ ಒತ್ತಾಯದಂತೆ, ಆಕೆಯ ಸಂಬಂಧಿ ಪ್ರಶಾಂತ್‌ನನ್ನು ಬೈಕ್‌ನಲ್ಲಿ ಕರೆದುಕೊಂಡು ಮನೆಯ ಕಡೆಗೆ ಹೊರಟಿದ್ದಾನೆ. ಆದರೆ, ದಾರಿಯಲ್ಲಿ ಕಾರ್ತಿಕ್ ಪ್ರಶಾಂತ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.
ಚಲಿಸುತ್ತಿದ್ದ ಬೈಕ್‌ನಲ್ಲಿಯೇ ಈ ದುರ್ಘಟನೆ ನಡೆದಿದ್ದು, ಕಾರ್ತಿಕ್ ಪ್ರಶಾಂತ್‌ನ ಕುತ್ತಿಗೆಯನ್ನು ಕೊಯ್ದು ಹತ್ಯೆಗೆ ಯತ್ನಿಸಿದ್ದಾನೆ.
ಗಾಯಗೊಂಡ ಪ್ರಶಾಂತ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಬಗ್ಗೆ ಸ್ಥಳೀಯರು ತಕ್ಷಣವೇ ಎಚ್‌ಎಎಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ತಕ್ಷಣ, ಆರೋಪಿ ಸೆಲ್ವ ಕಾರ್ತಿಕ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಯತ್ನ ಸೇರಿದಂತೆ, ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.