ದೊಡ್ಡಬಳ್ಳಾಪುರ: ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಕಳಪೆ ಗುಣಮಟ್ಟದ ಹಾಲನ್ನು ಬಳಸಿ ಅನಾರೋಗ್ಯಕ್ಕೆ ಒಳಗಾಗದೆ, ಉತ್ತಮ ಗುಣಮಟ್ಟದ ನಂದಿನ ಹಾಲನ್ನು ಬಳಸಿ ಆರೋಗ್ಯವನ್ನು ಕಾಪಾಡುವಂತೆ ಬಮೂಲ್ (Bamul) ಅಧ್ಯಕ್ಷ ಡಿ.ಕೆ.ಸುರೇಶ್ (D.K. Suresh) ಗ್ರಾಹಕರಲ್ಲಿ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಣಮಟ್ಟದ ಹಾಲು ಪೂರೈಕೆ, ರೈತರಿಗೆ ಉತ್ತಮ ದರ ನೀಡುವ ಜೊತೆಯಲ್ಲಿಯೇ, ಗ್ರಾಹಕರ ಹಿತ ಕಾಪಾಡಬೇಕಾದ ಹೊಣೆಗಾರಿಕೆ ಬಮೂಲ್ ಮೇಲಿದೆ.
ಈ ನಿಟ್ಟಿನಲ್ಲಿ ಬಮೂಲ್ ಅಧ್ಯಕ್ಷನಾದ ಬಳಿಕ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ರೈತರ, ಒಕ್ಕೂಟದ ಸಮಸ್ಯೆಗಳನ್ನು ತಿಳಿಯಲಾಗುತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಾಲು ಪೂರೈಕೆ ಕಡಿಮೆಯಾಗಿದ್ದು, ಇದನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಚರ್ಚಿಸುತ್ತೇವೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಟೆಟ್ರಾ ಪ್ಯಾಕೆಟ್ ಘಟಕ ಸ್ಥಾಪನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಾಲಿನ ಪೂರೈಕೆ ಕಡಿಮೆಯಾಗಿರುವ ಕಾರಣ ಘಟಕ ಸ್ಥಾಪನೆ ಕುರಿತು ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದೆ.
ಟೆಟ್ರಾ ಪ್ಯಾಕೇಟ್ ಘಟಕ ಸ್ಥಾಪನೆ ಸಾಧಕ ಬಾಧಕದ ಕುರಿತು ಚರ್ಚೆ ಮಾಡಬೇಕಿದೆ. ಈಗಾಗಲೇ ಪರಿಸರಕ್ಕೆ ಮಾರಕವಾಗದಂತೆ ನಂದಿನ ಹಾಲಿನ ಪ್ಯಾಕೇಟ್ ಬಳಕೆಗೆ ಒತ್ತು ನೀಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಎರಡು ರೂ. ಹೆಚ್ಚಳವಾಗಲಿದೆ. ಲಕ್ಷಾಂತರ ಪ್ಲಾಸ್ಟಿಕ್ ಲವರ್ ಬಳಕೆಯಿಂದ ಉಂಟಾಗುತ್ತಿರುವ ಪರಿಸರಮಾಲಿನ್ಯ ತಡೆಯಲು ಗ್ರಾಹಕರ ಸಹಕಾರ, ಪ್ರತಿಕ್ರಿಯೆ ಯಾವ ರೀತಿ ಸಿಗುತ್ತದೆ ಎಂಬುದನ್ನು ತಿಳಿಯಲು ಬೆಂಗಳೂರಿನಲ್ಲಿ ಟ್ರಯಲ್ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಇಲ್ಲಿ ಖರೀದಿಸಿರುವ ಜಮೀನಿನನ್ನು ಯಾವ ರೀತಿ ಬಳಕೆ ಮಾಡಬೇಕೆಂಬ ಕುರಿತು ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಉಂಟಾದ ಅನಿರೀಕ್ಷೀತ ಹಿನ್ನಡೆಯ ಕಾರಣ, ಸ್ಥಳೀಯ ರೈತರು ಡಿ.ಕೆ. ಸುರೇಶ್ ಅವರಿಗೆ ಒತ್ತಡ ಹೇರಿ ಬಮೂಲ್ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದರು. ಅದರ ಪರಿಣಾಮ ಈಗ ಅವರು ಅಧ್ಯಕ್ಷರಾಗಿ ಬಮೂಲ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳ ಕುರಿತು ಪ್ರಧಾನಿ ಮೋದಿ ಆದಿಯಾಗಿ, ಮಾಜಿ ಪ್ರಧಾನಿ ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ದಿವಾಳಿ ಆಗುತ್ತದೆ ಎಂದು ಆರೋಪಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರದ ದಿಟ್ಟ ಯೋಜನೆಯಿಂದ ಕರ್ನಾಟಕದ ಜನತೆಯ ತಲಾದಾಯ ಎರಡು ಲಕ್ಷಕ್ಕೆ ಏರಿಕೆಯಾಗಿದೆ ಎಂದು ಆರೋಪ ಮಾಡಿದವರಿಗೆ ಉತ್ತರವಾಗಿದೆ ಎಂದರು.
ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಅರವಿಂದ ಮಾತನಾಡಿ, ಬಮೂಲ್ ಚುನಾವಣೆಯಲ್ಲಿ ಗೆದ್ದು, ಬಮೂಲ್ ಅದ್ಯಕ್ಷರಾಗಿ ಪ್ರಾಮಾಣಿಕವಾಗಿ ರೈತರ ಪರ ಸೇವೆ ಸಲ್ಲಿಸುತ್ತಿರುವ ಡಿ.ಕೆ. ಸುರೇಶ್ ಅವರು ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ನಿಶ್ವಿತ ಎಂದರು.
ಈ ವೇಳೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ವಿಧಾನಪರಿಷತ್ ಸದಸ್ಯ ಎಸ್.ರವಿ, ದೊಡ್ಡಬಳ್ಳಾಪುರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ ಸೇರಿದಂತೆ ಅನೇಕರು ಇದ್ದರು.