ಬೆಂಗಳೂರು: ಮಾಜಿ ಸಂಸದೆ ರಮ್ಯಾ (Ramya) ಅವರಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಮ್ಯಾ ಅವರಿಗೆ ಅಶ್ಲೀಲ ಹಾಗೂ ಅವಾಚ್ಯ ಪದಗಳನ್ನು ಬಳಸಿ ಕಮೆಂಟ್ ಹಾಗೂ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಪೊಲೀಸರು ಕೋಲಾರ ಹಾಗೂ ಚಿತ್ರದುರ್ಗ ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಕಿಡಿಗೇಡಿಗಳ ಐಪಿ ಅಡ್ರೆಸ್ ಆಧರಿಸಿ ಮೂವರನ್ನು ವಶಕ್ಕೆ ಪಡೆದಿದ್ದು, ಇದೀಗ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ರಮ್ಯಾ ದೂರು ದಾಖಲಿಸುವ ವೇಳೆ 43 ಅಕೌಂಟ್‌ಗಳ ಹೆಸರು ಉಲ್ಲೇಖಿಸಿದ್ದಾರೆ. ಬಳಿಕ ಪೊಲೀಸರ ಮುಂದೆ ಹೇಳಿಕೆ ನೀಡುವ ವೇಳೆ ಮತ್ತೆ ಐದು ಅಕೌಂಟ್‌ಗಳನ್ನು ಸೇರಿಸಿದ್ದಾರೆ. ಒಟ್ಟು 48 ಅಕೌಂಟ್‌ಗಳ ಮೇಲೆ ದೂರು ದಾಖಲಾಗಿದೆ.
ಎಫ್‌ಐಆರ್ ದಾಖಲಾದ ತಕ್ಷಣ ಬಹುತೇಕ ಅಕೌಂಟ್‌ಗಳು ಡಿಲಿಟ್ ಆಗಿದ್ದವು.
ಬಳಿಕ ಪೊಲೀಸರು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆದು, ಐಪಿ ಅಡ್ರೆಸ್ ಹಾಗೂ ಅಕೌಂಟ್ ಡಿಟೇಲ್‌ಗಳನ್ನು ಕೊಡುವಂತೆ ಮನವಿ ಮಾಡಿದ್ದರು. ಪೊಲೀಸರ ಮನವಿಯಂತೆ ಸಂಬಂಧಪಟ್ಟ ಸಂಸ್ಥೆಗಳು ಡಿಲಿಟ್ ಆಗಿದ್ದ ಅಕೌಂಟ್‌ಗಳ ಎಲ್ಲಾ ಮಾಹಿತಿಯನ್ನು ಸಿಸಿಬಿ ಪೊಲೀಸರಿಗೆ ನೀಡಿವೆ.
ಇದೀಗ ಇಬ್ಬರ ಬಂಧನದಿಂದ ಇತರ ಕಿಡಿಗೇಡಿಗಳಿಗೂ ಬಿಸಿ ಮುಟ್ಟಿಸಿದಂತಾಗಿದೆ.