ಬೆಂಗಳೂರು: ಒಕ್ಕಲಿಗ (Vokkaliga) ಸಮುದಾಯಕ್ಕೆ ಅನ್ಯಾಯವಾದಾಗ ಪ್ರತಿಯೊಬ್ಬರೂ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಕರೆ ನೀಡಿದರು.
ರಾಜ್ಯ ಒಕ್ಕಲಿಗರ ಜಾಗೃತಿ ಸಂಘದಿಂದ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮುದಾಯಕ್ಕೆ ಅನ್ಯಾಯವಾದಾಗ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು. ಅಂದರೆ ಮಾತ್ರ ಸಮುದಾಯಕ್ಕೆ ನ್ಯಾಯ ದೊರೆಯುತ್ತದೆ. ನಾಡಪ್ರಭು ಕೆಂಪೇಗೌಡರು ಯಾರ ಮೇಲೂ ದಂಡೆತ್ತಿ ಹೋಗಿ ಸಾಮ್ರಾಜ್ಯ ಸ್ಥಾಪಿಸಲಿಲ್ಲ. ಅವರು ಎಲ್ಲರನ್ನೂ ಸಮಾನತೆಯಿಂದ ಕಂಡು ಬೆಂಗಳೂರನ್ನು ಕಟ್ಟಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಸ್.ಎಂ.ಕೃಷ್ಣ, ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸಮುದಾಯದಲ್ಲಿ ಇನ್ನಷ್ಟು ಯುವಜನರನ್ನು ಬೆಳೆಸಿದರೆ ಈ ರೀತಿ ಮಹಾನ್ ವ್ಯಕ್ತಿಗಳಾಗುತ್ತಾರೆ. ಬೇರೆ ಸಮುದಾಯಕ್ಕೆ ಅನ್ಯಾಯ ಮಾಡದೆ ನಮ್ಮ ಸಮುದಾಯಕ್ಕಾಗಿ ಹೋರಾಟ ಮಾಡಬೇಕು ಎಂದರು.
ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಪ್ರತಿ ವರ್ಷ ಆಚರಣೆ ಮಾಡಿದರೆ ಸಾಲುವುದಿಲ್ಲ. ಒಕ್ಕಲಿಗ ಸಮುದಾಯದವರು ಕೃಷಿ ಮಾಡುವವರು. ಇಂತಹ ಸಮುದಾಯದವರ ಹಕ್ಕುಗಳಿಗಾಗಿ ಎಲ್ಲರೂ ಒಗ್ಗೂಡಬೇಕು. ಈ ಹಿಂದೆ ಒಂದು ಬಾರಿ ಹಕ್ಕುಗಳಿಗಾಗಿ ಹೋರಾಡಿದ್ದನ್ನು ನೋಡಿದ್ದೇನೆ. ಮತ್ತೆ ಎಂದೂ ಹೋರಾಟ ಮಾಡಿದ್ದನ್ನು ಕಂಡಿಲ್ಲ.
ಶ್ರೀ ಬಾಲಗಂಗಾಧನರನಾಥ ಸ್ವಾಮೀಜಿಯವರ ಪ್ರೇರಣೆಯಿಂದಾಗಿ 70 ವರ್ಷದ ಬಳಿಕ ವಿಧಾನಸೌಧ ಮುಂಭಾಗ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಸಾಧ್ಯವಾಯಿತು. ಅಂದರೆ ಕೆಂಪೇಗೌಡರಿಗೆ ಆ ಗೌರವ ನೀಡಲು ಅಷ್ಟು ವರ್ಷ ಬೇಕಾಯಿತು.
ನಾನು ಕಂದಾಯ ಸಚಿವನಾಗಿದ್ದಾಗ ಒಂದೇ ತಿಂಗಳಲ್ಲಿ ನಿರ್ಣಯ ತೆಗೆದುಕೊಂಡು ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಯಿತು. ಅದೇ ರೀತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಪ್ರತಿಮೆ ಸ್ಥಾಪಿಸಲಾಯಿತು ಎಂದರು.