ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಮಂಗಳವಾರ ಅವಳಿ ಮೇಘಸ್ಫೋಟ (Cloudburst) ಸಂಭವಿಸಿದ್ದು, ಪ್ರಕೃತಿಯ ರೌದ್ರ ನರ್ತನಕ್ಕೆ ದೇವಭೂಮಿ ಅಕ್ಷರಶಃ ತತ್ತರಿಸಿ ಹೋಗಿದೆ.
ಆರಂಭದಲ್ಲಿ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿ ಪ್ರವಾಹ ಪರಿಸ್ಥಿತಿ ತಲೆದೋರಿತು. ಅದರ ಬೆನ್ನಲ್ಲೇ ಸುಖಿ ಟಾಪ್ ಗ್ರಾಮದಲ್ಲಿಯೂ ಮೇಘಸ್ಫೋಟ ಉಂಟಾಗಿದ್ದು, ಪ್ರವಾಹ ಗುಡ್ಡದಿಂದ ರಭಸದಿಂದ ಹರಿದು ಬಂದಿದೆ.
ಈ ದುರಂತದಲ್ಲಿ ಧರಾಲಿ ಗ್ರಾಮದ 4 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಇಡೀ ಧರಾಲಿ ಗ್ರಾಮವೇ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ಸ್ಥಳಕ್ಕೆ ಅಧಿಕಾರಿ ಗಳು, ಭದ್ರತಾ ತಂಡದ ಸದಸ್ಯರು ಧಾವಿ ಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸುಖಿ ಟಾಪ್‌ನಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಯಾವುದೇ ಜೀವ ಹಾನಿಯಾಗಿರುವ ಬಗ್ಗೆ ವರದಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಮೇಘಸ್ಪೋಟ ನಡೆದ ಉತ್ತರಕಾಶಿ ಜಿಲ್ಲೆಯ ಧರಾಲಿ ಸಮೀಪವೇ ಸುಖಿ ಟಾಪ್ ಇದೆ. ಗಂಗೋತ್ರಿಗೆ ತೆರಳುವ ಮಾರ್ಗ ಮಧ್ಯೆ ಧಾರಾಲಿ ಗ್ರಾಮವಿದೆ. ಕಮೀಷನರ್ ವಿನಯ್ ಶಂಕರ್ ಈ ಬಗ್ಗೆ ಮಾಹಿತಿ ನೀಡಿ, ‘ಉತ್ತರಕಾಶಿಯ ಸುಖಿ ಟಾಪ್‌ನಲ್ಲಿಯೂ ಮೇಘಸ್ಪೋಟದ ಉಂಟಾಗಿದೆ, ಅಲ್ಲಿ ಯಾವುದೇ ಜೀವಕ್ಕೆ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮಳೆ ಜೋರಾಗಿ ಸುರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ’ ಎಂದು ತಿಳಿಸಿದ್ದಾರೆ.
ಹರ್ಸಿಲ್ ಬಳಿಯ ಖೀರ್ ಗಡ್ ಪ್ರದೇಶದ ಧರಾಲಿ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತ ಸಂಭವಿಸಿದ್ದು, ರಸ್ತೆಗಳು ಮುಚ್ಚಿ ಹೋಗಿವೆ. ಜನವಸತಿ ಪ್ರದೇಶದ ಮೂಲಕ ಧಿಡೀರ್ ಪ್ರವಾಹ ಹರಿದಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಪ್ರವಾಹದ ರಭಸಕ್ಕೆ ಹಲವು ಮನೆಗಳು ಹಾನಿಗೊಳಗಾಗಿವೆ, ಕೆಲವು ಕೊಚ್ಚಿ ಹೋಗಿವೆ.
ಕೆಸರಿನಿಂದ ಎದ್ದು ಬಂದ ವ್ಯಕ್ತಿ
ಇದರ ನಡುವೆಯೇ ವ್ಯಕ್ತಿಯೋರ್ವ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಧರಾಲಿ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ಪರಿಣಾಮ ಇಡೀ ಗ್ರಾಮವೇ ಸರ್ವನಾಶವಾಗಿದೆ. ಇದರ ನಡುವೆಯೇ ವ್ಯಕ್ತಿಯೋರ್ವ ಕೆಸರು ಮಣ್ಣಿನಲ್ಲಿ ತೆವಳುತ್ತಾ ತೊರಬರುತ್ತಿರುವ ವಿಡಿಯೋ ಎದೆ ಝಲ್ ಎನ್ನಿಸುತ್ತದೆ.
ವೈರಲ್ ಆದ ವಿಡಿಯೋದಲ್ಲಿ ಸುತ್ತಲೂ ಪ್ರವಾಹದಿಂದ ಎಲ್ಲವೂ ನೆಲಸಮವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದರ ನಡುವೆಯೂ ವ್ಯಕ್ತಿಯೋರ್ವ ತನ್ನ ಜೀವವನ್ನು ಉಳಿಸಿಕೊಳ್ಳಲು ಕೆಸರಿನಲ್ಲಿ ಓಡೋಡಿ ಬರುತ್ತಿದ್ದಾನೆ. ಕೆಲ ದೂರ ಬಂದ ಬಳಿಕ ಆತ ಕೆಸರಿನಲ್ಲಿ ಸಿಲುಕಿಕೊಂಡಿದ್ದು, ತೆವಳುತ್ತಾ ಹೊರ ಬಂದಿದ್ದಾನೆ.
ಈ ವೇಳೆ ಉಳಿದವು ಭಾಗ್. ಭಾಗ್. (ಓಡು. ಓಡು..) ಎಂದು ಬೊಬ್ಬೆ ಹೊಡೆದಿದ್ದಾರೆ. ಈ ವೇಳೆ ಕಷ್ಟ ಪಟ್ಟು ಹೇಗೊ ಮುಂದಕ್ಕೆ ಚಲಿಸಿದ್ದಾನೆ. ಆದರೆ ಇದೇ ವೇಳೆ ಮತ್ತೋರ್ವ ವ್ಯಕ್ತಿ ಸುರಕ್ಷಿತ ಪ್ರದೇಶಕ್ಕೆ ಓಡಿ ಬರುತ್ತಿರುತ್ತಾನೆ. ಇದನ್ನು ಗಮನಿಸಿ ಕ್ಯಾಮೆರಾವನ್ನ ಆತನ ಕಡೆ ತಿರುಗಿಸಿದ್ದಾರೆ.
ಆತ ಸೇಫ್ ಆಗುತ್ತಿದ್ದಂತೆ ಮೊದಲ ವ್ಯಕ್ತಿ ಕಡೆ ತಿರುಗಿಸಿದಾಗ ಆತ ಎಲ್ಲೂ ಕಾಣಿಸಲಿಲ್ಲ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಕೂಡ ರಕ್ಷಿಸಲಾಗಿದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಇನ್ನು ಉತ್ತರಕಾಶಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಭೂಕುಸಿತದ ನಡುವೆ ಮಳೆ ಹೆಚ್ಚಾದ ಪರಿಣಾಮ ಇಂದು ಹರಿದ್ವಾರ, ನೈನಿತಾಲ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.