Harithalekhani: ಒಂದು ಊರಿನಲ್ಲಿ ಶಿವಪ್ಪ ಎಂಬ ಬಡ ರೈತನು ತನ್ನ ಚಿಕ್ಕ ಸಂಸಾರದೊಡನೆ ತನ್ನ ಹೆಸರಲ್ಲಿದ್ದ ಸಣ್ಣ ಭೂಮಿಯಲ್ಲೇ ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಿದ್ದ.
ಒಂದು ದಿನ ಆತ ತನ್ನ ಜಮೀನಿನಲ್ಲಿ ಹಾವಿನ ಹುತ್ತವನ್ನು ಕಂಡ. ಅವನು ಹುತ್ತವನ್ನು ಕಡಿಸದೆ ಅದಷ್ಟು ಜಾಗವನ್ನು ಬಿಟ್ಟು ವ್ಯವಸಾಯ ಮಾಡತೊಡಗಿದ. ಆತ ದಿನೇ ದಿನೇ ಹುತ್ತದ ಬಳಿ ಹಾಲನ್ನಿಡುತ್ತಿದ್ದ. ಆ ಹಾಲನ್ನು ಹುತ್ತದೊಳಗಿದ್ದ ಹಾವು ಕುಡಿದು ತನ್ನ ಬಾಯಿಯಿಂದ ಚಿನ್ನದ ನಾಣ್ಯವನ್ನು ತೆಗೆದು ಬಟ್ಟಲಿನಲ್ಲಿಟ್ಟು ಹೋಗುತ್ತಿತ್ತು.
ಶಿವಪ್ಪ ಚಿನ್ನದ ನಾಣ್ಯಗಳನ್ನು ಮಾರಿ ಅದರಿಂದ ಬಂದ ಹಣವನ್ನು ಕೂಡಿಸಿದ. ಹೀಗೆ ಆತ ಹಾವಿನಿಂದ ಪಡೆದ ಅನೇಕ ಚಿನ್ನದ ನಾಣ್ಯಗಳನ್ನು ಮಾರಿಬಂದ ಹಣದಿಂದ ಹೊಸ ಜಮೀನನ್ನು ಖರೀದಿ ಮಾಡಿದ. ಶ್ರಮಪಟ್ಟು ದುಡಿದ. ಬಂದ ಫಸಲನ್ನು ಮಾರಿ ಶ್ರೀಮಂತ ವ್ಯಕ್ತಿಯಾದ. ತಾನು ಶ್ರೀಮಂತನಾದರೂ ಸಹ ಹಾವಿಗೆ ಹಾಲನ್ನಿಡುವುದು ಬಿಡಲಿಲ್ಲ.
ಒಂದು ದಿನ ಶಿವಪ್ಪನಿಗೆ ಅನಿವಾರ್ಯವಾಗಿ ಸಂಬಂಧಿಕರ ಮನೆಗೆ ಹೋಗಬೇಕಾಗಿ ಬಂತು. ಆಗ ಶಿವಪ್ಪ ತನ್ನ ಮಗನಿಗೆ ಹುತ್ತದ ಬಳಿ ಹಾಲನ್ನಿಟ್ಟು ಬರಲು ಹೇಳಿದ. ಅವನ ಮಾತಿನಂತೆ ಶಿವಪ್ಪನ ಮಗ ಹುತ್ತದ ಬಳಿ ಹಾಲನ್ನಿಟ್ಟ. ಎಂದಿನಂತೆ ಹಾವು ಹಾಲು ಕುಡಿದ ನಂತರ ಚಿನ್ನದ ನಾಣ್ಯವನ್ನಿಟ್ಟಿತು. ಅದನ್ನು ಕಂಡ ಶಿವಪ್ಪನ ಮಗನಿಗೆ ದುರಾಲೋಚನೆ ಉಂಟಾಯಿತು. ಆತ ಪಕ್ಕದಲ್ಲೇ ಬಿದ್ದಿದ್ದ ದಪ್ಪ ಕೋಲನ್ನು ತೆಗೆದುಕೊಂಡು ಹಾವಿಗೆ ಹೊಡೆದೊಡೆದು ಸಾಯಿಸಿದ. ನಂತರ ಹುತ್ತವನ್ನು ಒಡೆದ. ತಕ್ಷಣವೇ ಅಳತೊಡಗಿದ.
‘ಹುತ್ತದಲ್ಲಿ ಬಹಳಷ್ಟು ನಾಣ್ಯಗಳಿವೆ. ಅದನ್ನು ಹಾವು ತಂದು ಕೊಡುತ್ತೆ, ಹುತ್ತವನ್ನು ಒಡೆದರೆ ಒಂದೇ ಬಾರಿಗೆ ಹಲವಾರು ನಾಣ್ಯಗಳನ್ನು ಪಡೆಯಬಹುದು’ ಎಂದು ಯೋಚಿಸಿ ಆತ ಹುತ್ತವನ್ನು ಹೊಡೆದಿದ್ದ. ಹಾವನ್ನು ಸಾಯಿಸಿದ್ದ.
ತಾನು ಮಾಡಿದ್ದು ತಪ್ಪು ಎಂದು ತಿಳಿದು ಶಿವಪ್ಪನ ಮಗ ಅಲ್ಲೇ ಕುಳಿತ. ಶಿವಪ್ಪ ಊರಿನಿಂದ ಬಂದ. ಮಗ ಎಷ್ಟು ಹೊತ್ತಾದರೂ ಬರಲಿಲ್ಲವೆಂದು ಅವನಲ್ಲಿಗೆ ಹೋದ. ಮಗ ಮಾಡಿದ ತಪ್ಪನ್ನು ಕಂಡು ಪಶ್ಚಾತ್ತಾಪಗೊಂಡ. ಹಾವು ಸತ್ತು ಬಿದ್ದುದನ್ನು ಕಂಡು ದುಃಖಪಟ್ಟ, ಕೆಲವು ದಿನಗಳ ನಂತರ ಹಾವು ಕೊಟ್ಟ ಚಿನ್ನದ ನಾಣ್ಯದಿಂದ ಖರೀದಿಸಿದ ಜಮೀನನ್ನು ಬೇರೆಯವರು ವಶಪಡಿಸಿಕೊಂಡರು. ತಾನು ಸಂಪಾದಿಸಿದ ಹಣವೆಲ್ಲಾ ಕಳುವಾಯಿತು. ಶಿವಪ್ಪ ತನ್ನ ಮೊದಲಿನ ಸ್ಥಿತಿಗೆ ಬಂದು ನಿಂತ.
ಶಿವಪ್ಪನಿಗೆ ತನ್ನ ಮಗ ಹಾವನ್ನು ಸಾಯಿಸಿದ್ದರಿಂದಲೇ ಈ ಎಲ್ಲಾ ಪರಿಸ್ಥಿತಿ ನಿರ್ಮಾಣವಾಗಲು ಕಾರಣ ಎಂದು ತಿಳಿಯಿತು. ಮೊದಲು ಹೇಗೆ ಬಡ ರೈತನಾಗಿ ತನ್ನ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದನೋ ಹಾಗೆಯೇ ತನ್ನ ಜೀವನ ಮುಂದುವರೆಸಿದ. ಇದರಿಂದಾಗಿ ಶಿವಪ್ಪನ ಮಗ ‘ಅತಿಯಾಸೆ ಗತಿಗೇಡು’ ಎಂಬ ಪಾಠ ಕಲಿತ.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.