ದೊಡ್ಡಬಳ್ಳಾಪುರ: ಕೃಷಿ ಜಮೀನುಗಳಲ್ಲಿನ ಬೋರ್ವೆಲ್ ಗೆ ಅಳವಡಿಸಿದ್ದ ಕೇಬಲ್ ವೈರ್ ಗಳನ್ನು (Cable wire) ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು (Thieves) ಬೆನ್ನತ್ತಿದ ರೈತರು, ವಾಹನವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ನಾಗಲಾಪುರದ ಬಳಿ ರಾತ್ರಿ 2 ಗಂಟೆ ವೇಳೆಗೆ ಕೃಷಿ ಜಮೀನಿನಲ್ಲಿ ಅಳವಡಿಸಿದ್ದ ಬೋರ್ವೆಲ್ ಕೇಬಲ್ ವೈರ್ ಕದ್ದು, ಟಾಟಾ ಏಸ್ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ವೇಳೆ ರೈತರು ತಡೆದಿದ್ದಾರೆ.
ಈ ವೇಳೆ ಕಳ್ಳರು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಇಂದು ಬೆಳಗ್ಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ರೈತರು ಹಿಡಿದು, ಪೊಲೀಸರಿಗೆ ಒಪ್ಪಿಸಲು ಕಾರಲ್ಲಿ ಕೂರಿಸಿದಾಗ, ಮತ್ತೊಂದು ಬದಿಯ ಬಾಗಿಲು ತೆರೆದು ಆತ ಕೂಡ ಪರಾರಿಯಾಗಿದ್ದಾನೆ.
ಕಳ್ಳರು ತಂದಿದ್ದ ಟಾಟಾ ಏಸ್ ವಾಹನದಲ್ಲಿ ವಿವಿಧ ಗ್ರಾಮಗಳ ಕೃಷಿ ಜಮೀನುಗಳಲ್ಲಿ ಕತ್ತರಿಸಲಾಗಿದ್ದ ಸುಮಾರು 50 ಕ್ಕೂ ಹೆಚ್ಚು ಮೀಟರ್ ಕೇಬಲ್ ವೈರ್ ತುಂಡುಗಳು ಪತ್ತೆಯಾಗಿದೆ.
ಟಾಟಾ ಏಸ್ ವಾಹನ ಯಲಹಂಕ ಮೂಲದ ನೊಂದಣಿಯಾಗಿರುವ ದಾಖಲೆ ಪತ್ತೆಯಾಗಿದೆ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಮೊಬೈಲ್ ಹಾಗೂ ಟಾಟಾ ಏಸ್ ವಾಹನವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಸೂಲುಕುಂಟೆ, ಚನ್ನವೀರನಹಳ್ಳಿ, ಬೆನಕಿನ ಮಡಗು, ಕಾಡು ಆಲಪ್ಪನಹಳ್ಳಿ, ಸಾಸಲು, ಬೋವಿ ಪಾಳ್ಯದ ಕೃಷಿ ಜಮೀನುಗಳಲ್ಲಿ ಅಳವಡಿಸಿರುವ ಬೋರ್ ವೆಲ್ ಗಳಿಂದ ತಲಾ ಒಂದೊಂದು ಮೀಟರ್ ಕೇಬಲ್ ವೈರ್ ಕದಿಯಲಾಗಿದೆ ಎಂದು ರೈತರು ದೂರಿದ್ದಾರೆ.
ಈ ಕುರಿತಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.