ನವದೆಹಲಿ: ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ.
ಇದರ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗ ಭಾನುವಾರ ಮಧ್ಯಾಹ್ನ 3 ಗಂಟೆಗೆ ಮಹತ್ವದ ಸುದ್ದಿಗೋಷ್ಟಿ ಕರೆದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿಯ ರೈಸಿನಾ ರಸ್ತೆಯಲ್ಲಿರುವ ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಸುದ್ದಿಗೋಷ್ಠಿ ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡು ಕರಡು ಮತದಾರರ ಪಟ್ಟಿ ಪ್ರಕಟಿಸಿದ ನಂತರ ಆಯೋಗ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸುತ್ತಿದೆ.
ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇನ್ನೊಂದೆಡೆ, ಕಾಂಗ್ರೆಸ್ ‘ಮತ ಕಳವು’ ಆರೋಪ ಮಾಡುತ್ತಾ ಚುನಾವಣಾ ಆಯೋಗದ ವಿರುದ್ದ ತೀವ್ರ ಸ್ವರೂಪದಲ್ಲಿ ದಾಳಿ ಮಾಡುತ್ತಿದೆ. ಉಪ ರಾಷ್ಟ್ರಪತಿ ಚುನಾವಣೆಯೂ(ಸೆ.9) ಸಮೀಪದಲ್ಲೇ ಇದೆ. ಈ ಅಂಶಗಳ ಹಿನ್ನೆಲೆಯಲ್ಲಿ ಆಯೋಗ ಸುದ್ದಿಗೋಷ್ಠಿ ಕರೆದಿರುವುದು ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಆ.1ರಂದು ಚುನಾವಣಾ ಆಯೋಗದ ವಿರುದ್ದ ಬೆಂಗಳೂರು ನಗರ ವ್ಯಾಪ್ತಿಯ ಮಹದೇವ ಪುರದಲ್ಲಿ ಲಕ್ಷ ಮತಗಳು ಅಕ್ರಮ ನಡೆದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಕ್ರಮವಾಗಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದರು. ‘ಮತ ಕಳವು’ ಆರೋಪ ಸಂಬಂಧ ಪುರಾವೆಗಳಿವೆ ಎಂದೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆಯೋಗದ ಸುದ್ದಿಗೋಷ್ಠಿ ಬಗ್ಗೆ ಕುತೂಹಲ ಹೆಚ್ಚಿದೆ.