ದೊಡ್ಡಬಳ್ಳಾಪುರ: ನಗರದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ದಳ್ಳಾಳ್ಳಿಗಳು (Brokers) ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಸಾಮಾನ್ಯ ಜನರ ಕೈಗೆ ಸಿಗದೆ ಪರದಾಡು ಪರಿಸ್ಥಿತಿಯುಂಟಾಗಿದೆ ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಇಂದು ರಾಜ್ಯ ವಿಜಯಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.

ನಗರದ ತಾಲೂಕು ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ “ವಿ”ಕರವೇ ಸಂಸ್ಥಾಪಕ ಅಧ್ಯಕ್ಷ ಎ.ನಂಜಪ್ಪ, ದೊಡ್ಡಬಳ್ಳಾಪುರ ತಾಲ್ಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಎರಡು ಕಚೇರಿಗಳಲ್ಲಿ ದಳ್ಳಾಳಿಗಳ ಹಾವಳಿ ಮಿತಿಮೀರಿದ್ದು, ತಮ್ಮ ಕೆಲಸಗಳ ಕಾರಣ ತಾಲೂಕು ಕಚೇರಿಗೆ ಬರುವ ಸಾಮಾನ್ಯ ಜನರನ್ನು ದಿಕ್ಕುತಪ್ಪಿಸಿ, ವಂಚಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ತಾಲ್ಲೂಕು ಕಚೇರಿಯಲ್ಲಿ ಲಂಚವಿಲ್ಲದೆ ಯಾವ ಸರ್ಕಾರಿ ಕೆಲಸಗಳು ನಡೆಯುವುದಿಲ್ಲ ಎಂದು ನೂರಾರು ದೂರುಗಳನ್ನು ನಾಗರೀಕರು ನಮ್ಮ ಸಂಘಟನೆಗೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿಯ ಹಳೇಕೋಟೆ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಕ್ಲಸ್ಟರ್ ನಿರ್ಮಿಸಿ ದಿನನಿತ್ಯ ಭಾರಿ ಗಾತ್ರದ ಟಿಪ್ಪರ್ ವಾಹನಗಳ ಸಂಚರಿಸುವುದರಿಂದ ಈ ವ್ಯಾಪ್ತಿಯ ಗ್ರಾಮಸ್ಥರು ದಿನನಿತ್ಯ ಸಂಚರಿಸುವ ರಸ್ತೆಯು ಹದಗೆಟ್ಟು ಅಪಘಾತ ಅನಾಹುತಗಳು ಸಂಭವಿಸುತ್ತಿವೆ. ಅಲ್ಲದೆ ಗ್ರಾಮದ ಸುತ್ತಮುತ್ತಲ ರೈತರಿಗೆ ಪರಿಸರಕ್ಕೂ ತುಂಬಾ ತೊಂದರೆಯಾಗುತ್ತಿದೆ. ಈ ಕುರಿತಂತೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಿ.ನಯಾಜ್ ಖಾನ್, ಸೋಮರಾಜು, ಗಂಗರಾಜಪ್ಪ, ಮಂಜುನಾಥ್, ಪ್ರವೀಣ್ ಕುಮಾರ್, ಚಂದ್ರ, ಕುಮುದಾ, ಶಶಿಕಲಾ, ರಾಗಿಣಿ, ನಾಗರತ್ನಮ್ಮ, ನಾಗಮಣಿ, ರಮೇಶ್ ಮತ್ತಿತರರಿದ್ದರು.