ಅರಾರಿಯಾ (ಬಿಹಾರ): “ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ‘ವೋಟ್ ಅಧಿಕಾರ ಯಾತ್ರೆ’ ದೇಶದ ಪಾಲಿನ ಗೇಮ್ ಚೇಂಜರ್” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಬಣ್ಣಿಸಿದ್ದಾರೆ.
ಬಿಹಾರದ ಅರಾರಿಯಾದಲ್ಲಿ ಅವರು ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.
“ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಬಿಹಾರದವರೆಗೆ ಧ್ವನಿ ಎತ್ತಿರುವ ವಿಚಾರದ ಬಗ್ಗೆ ಇಡೀ ದೇಶವೇ ಚರ್ಚಿಸುತ್ತಿದೆ. ರಾಹುಲ್ ಗಾಂಧಿ ಅವರು ತಮಗಾಗಿ ಈ ಹೋರಾಟ ಮಾಡುತ್ತಿಲ್ಲ. ಸಂವಿಧಾನದತ್ತವಾಗಿ ದೇಶದ ಜನಸಾಮಾನ್ಯರಿಗೆ ಸಿಕ್ಕಿರುವ ಹಕ್ಕಿನ ರಕ್ಷಣೆಗೆ ಹೋರಾಡುತ್ತಿದ್ದಾರೆ” ಎಂದು ತಿಳಿಸಿದರು.
The right-wing ecosystem is once again hard at work, circulating misleading images and falsely claiming that I was made to stand outside the jeep during the Voter Adhikar Yatra.
— DK Shivakumar (@DKShivakumar) August 24, 2025
Let’s set the record straight – with facts:
1.First, thank you for your undivided attention to the… pic.twitter.com/vsV3PbYG64
“ನಮ್ಮ ರಾಜ್ಯದಲ್ಲಿ ಏನಾಗಿದೆ ಎಂದು ನನಗೆ ಗೊತ್ತಿದೆ. ಮತದಾರರು ತಮ್ಮ ಹಕ್ಕನ್ನು ಪಡೆಯಲು ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟ್ ಬಗ್ಗೆ ನನಗೆ ಹೆಮ್ಮೆ ಇದೆ. ಬಿಹಾರದ ಜನ ಬದಲಾವಣೆ ಬಯಸಿದ್ದಾರೆ. ಮಹಾಘಟಬಂಧನ ಬಯಸಿದ್ದಾರೆ. ಇಲ್ಲಿನ ಯುವಕರು ಕೂಡ ಬೀದಿಗಿಳಿದು ಬೆಂಬಲ ನೀಡುತ್ತಿದ್ದಾರೆ. ಯುವಕರು ಬಹು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡುತ್ತಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.
“ನಮ್ಮ ಮಹಾಘಟಬಂಧನ ನೀಡಿರುವ ಗ್ಯಾರಂಟಿಗಳು ಜನರಿಗೆ ನೆರವಾಗಲಿದ್ದು, ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ನಾವು ಅಧಿಕಾರಕ್ಕೆ ಬಂದ ಎಲ್ಲಾ ರಾಜ್ಯಗಳಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಕಳೆದ ಬಾರಿ ಮಹಾಘಟಬಂಧನ ಅಲ್ಪ ಅಂತರದಲ್ಲಿ ಸೋತಿತ್ತು. ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸ ನನಗಿದೆ. ಈ ಬಾರಿ ಬಿಹಾರದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ರಚನೆಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕೀಯ
ಧರ್ಮಸ್ಥಳದ ವಿಚಾರವಾಗಿ ಕೇಳಿದಾಗ, “ಈ ವಿಚಾರವಾಗಿ ನಾನು ಈಗಾಗಲೇ ಸಾಕಷ್ಟು ಮಾತನಾಡಿದ್ದೇನೆ. ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ. ಅವರು ಬಾಯಿ ಮುಚ್ಚಿಕೊಳ್ಳಬೇಕು. ಬಿಜೆಪಿಯಲ್ಲಿ ಎರಡು ಬಣಗಳಿವೆ. ಹೀಗಾಗಿ ಈ ರೀತಿ ಮಾಡುತ್ತಿದ್ದಾರೆ. ಅವರು ತಮ್ಮ ವೈಫಲ್ಯಗಳನ್ನು ನಮ್ಮ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಸತ್ಯಾಂಶವನ್ನು ಜನರ ಮುಂದಿಡುತ್ತಿದ್ದೇವೆ” ಎಂದು ಹೇಳಿದರು.