ದೊಡ್ಡಬಳ್ಳಾಪುರ (Doddaballapura): ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ರಸ್ತೆ ಬದಿಯಲ್ಲಿನ ಚರಂಡಿ ನುಗ್ಗಿರುವ ಘಟನೆ ನಗರದ ಹೊರವಲಯದಲ್ಲಿನ ಪಾಲನಜೋಗಿಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.
ಗೌರಿಬಿದನೂರು ಕಡೆಯಿಂದ ಬೆಂಗಳೂರು ಕಡೆಗೆ ರಾಜ್ಯ ಹೆದ್ದಾರಿ ಹಿಂದೂಪುರ – ಯಲಹಂಕ ನಡುವಿನ ಪಾಲನಜೋಗಿಹಳ್ಳಿ ಬಳಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಗೌರಿಬಿದನೂರು ಮಾರ್ಗದಿಂದ ಕಾರು ಲಾರಿಯನ್ನು ಓಒರ್ ಟೇಕ್ ಮಾಡುವ ವೇಳೆ ಲಾರಿ ಬಲಬದಿಗೆ ಸಾಗಿ ಕಾರಿನ ಮುಂಭಾಗಕ್ಕೆ ಟಚ್ ಆಗಿದೆ. ಈ ವೇಳೆ ವೇಗದಲ್ಲಿದ್ದ ಕಾರು ಚಾಲನಕನ ನಿಯಂತ್ರಣ ತಪ್ಪಿದ್ದು, ಏಕಾಏಕಿ ಡಿವೈಡರ್ ಹಾರಿ ಮತ್ತೊಂದು ಭಾಗದಲ್ಲಿನ ರಸ್ತೆ ಬದಿಯ ಚರಂಡಿಗೆ ನುಗ್ಗಿದೆ. ಈ ವೇಳೆ ಮಣ್ಣಿನ ದಿಬ್ಬ ಕಾರಿನ ಕೆಳಭಾಗಕ್ಕೆ ತಾಕಿದ ಕಾರಣ, ಕಾರು ಪೂರ್ಣಪ್ರಮಾಣದಲ್ಲಿ ಚರಂಡಿಗೆ ಬೀಳುವುದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾರು ನುಗ್ಗಿದ ಸಮೀಪದಲ್ಲಿಯೇ ವಿದ್ಯುತ್ ಟ್ರಾನ್ಸಫಾರ್ಮರ್ ಕಂಬವಿದ್ದು ಅದಕ್ಕೆ ತಗುಲಿದ್ದರೆ, ಏಕಾಏಕಿ ಬಲಬದಿಗೆ ಅಡ್ಡಲಾಗಿ ಕಾರು ನುಗ್ಗಿದ ವೇಳೆ ಬೆಂಗಳೂರು ಕಡೆಯಿಂದ ಬೇರೆ ವಾಹನ ಬಂದಿದ್ದರೆ ದೊಡ್ಡಮಟ್ಟದ ಅನಾಹುತ ಸಂಭವಿಸುವ ಅಪಾಯವಿತ್ತು. ಆದರೆ ಅದೃಷ್ಟವಶಾತ್ ಯಾವುದೇ ತೊಂದರೆ ಉಂಟಾಗಿಲ್ಲ.
ಸಾರ್ವಜನಿಕರ ಆಕ್ರೋಶ
ಘಟನೆ ಸಂಭವಿಸಿದ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಖಾಸಗಿ ಕಾರ್ಖಾನೆ ಫಾಕ್ಸಕಾನ್‌ಗೆ ಕಾರ್ಮಿಕರನ್ನು ಕರೆದೊಯ್ಯುವ ಬಸ್ಸುಗಳು ರಸ್ತೆ ಬದಿಯಲ್ಲಿ ನಿಲ್ಲುತ್ತಿದ್ದು, ಇದರಿಂದ ಹಿಂದೆ ಬರುವ ವಾಹನಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಬಸ್ಸುಗಳು ರಸ್ತೆಯಲ್ಲಿ ನಿಲ್ಲುವ ಕಾರಣ ಅಡ್ಡರಸ್ತೆಯಿಂದ ಬರುವವರು ಹಿಂದೆ ಬರುವ ವಾಹನಗಳಿಗೆ ಕಾಣದೆ ಅಪಾಯಕ್ಕೆ ಕಾರಣವಾಗುತ್ತಿದೆ ಎಂದು ಮಾತಿನ ಚಕಮಕಿ ನಡೆಸಿದರು. ಈ ವೇಳೆ ಖಾಸಗಿ ಬಸ್ಸುಗಳು ತೆರಳು ಮುಂದಾದವಾದರು ಸಾರ್ವಜನಿಕರು ತಡೆದು ಪೊಲೀಸರು ಬರಬೇಕೆಂದು ಪಟ್ಟುಹಿಡಿದರು.
ಅಲ್ಲದೆ ಟೋಲ್ ರಸ್ತೆಯಲ್ಲಿ ನಿಗಾವಹಿಸದೆ ಹಣ ಸಂಗ್ರಹಕ್ಕೆ ಸೀಮಿತವಾಗಿದೆ ಎಂದು ಟೋಲ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಾಹನ ಸವಾರರು ಹಾಗೂ ರಸ್ತೆ ಬದಿಯ ಸ್ಥಳೀಯ ನಿವಾಸಿಗಳ ಸುರಕ್ಷತೆಗೆ ಟೋಲ್ ಕಂಪನಿ ಗಮನ ಹರಿಸುವಂತೆ ಆಗ್ರಹಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.