ಸಿಂದಗಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ (Murder) ಮಾಡಿರುವ ಘಟನೆ ತಾಲ್ಲೂಕಿನ ಗಣಿಹಾರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕೊಲೆಯಾದ ದುರ್ದೈವಿ ಮಹಿಳೆಯನ್ನು ನೀಲಮ್ಮ ಆನಗೊಂಡ (46 ವರ್ಷ) ಎಂದು ಗುರುತಿಸಲಾಗಿದೆ. ಆಕೆಯ ಪತಿ ಪರಮಾನಂದ ಹರಿತವಾದ ಆಯುಧದಿಂದ ಕತ್ತರಿಸಿ, ಬಾವಿಗೆ ಎಸೆದಿರುವುದಾಗಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತಂತೆ ಮೃತಳ ಪುತ್ರ ಷಣ್ಮುಖ ದೂರು ನೀಡಿದ್ದು, ಸೋಮವಾರ ರಾತ್ರಿ ಎಲ್ಲರೂ ಮಲಗಿದ್ದಾಗ ನೀಲಮ್ಮ ಜಮೀನಿನಲ್ಲಿನ ಮೆಕ್ಕೆಜೋಳಕ್ಕೆ ಹಂದಿಗಳ ಹಾವಳಿ ಇರುವುದರಿಂದ ಪಟಾಕಿ ಸಿಡಿಸಲು ಹೋದ ಸಂದರ್ಭದಲ್ಲಿ ಅವಳ ಬೆನ್ನತ್ತಿ ಹೋದ ಗಂಡ ಪರಮಾನಂದ ಅವಳನ್ನು ಕತ್ತರಿಸಿ ಬಾವಿಗೆ ಎಸೆದಿದ್ದಾನೆ.
ಮಂಗಳವಾರ ಬೆಳಿಗ್ಗೆ ಮಗ ತಾಯಿಯನ್ನು ಹುಡುಕುತ್ತ ಹೋದಾಗ ಪಕ್ಕದ ಬಾವಿಯ ಬಳಿ ರಕ್ತದ ಕಲೆಗಳನ್ನು ಕಂಡು ಬಾವಿಯಲ್ಲಿ ಹುಡುಕಿದಾಗ ದೇಹದ ಅರ್ಧ ಭಾಗ ಸಿಕ್ಕಿದೆ. ದೇಹದ ಇನ್ನರ್ಧ ಭಾಗದ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.