
ಬೆಂಗಳೂರು: ಧರ್ಮಸ್ಥಳ ವಿಷಯದಲ್ಲಿ ಷಡ್ಯಂತ್ರ್ಯ, ಪಿತೂರಿ ನಡೆಸಿದವರಿಗೆ ಆ ಮಂಜುನಾಥ ಸ್ವಾಮಿಯೇ ತಕ್ಕ ಶಾಸ್ತಿ ಮಾಡುತ್ತಾನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಗುಡುಗಿದರು.
ನಗರದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರು; ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿ ರಚನೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿದರಲ್ಲದೆ ಕೆಲವು ಶಕ್ತಿಗಳ ಒತ್ತಡಕ್ಕೆ ಮಣಿದು ಎಸ್ ಐಟಿ ರಚನೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಧರ್ಮಸ್ಥಳದ ವಿಚಾರದಲ್ಲಿ ಈ ಸರ್ಕಾರ ನಡೆದುಕೊಂಡಿದ್ದು ಸರಿಯಲ್ಲ, ಅದಕ್ಕೆ ಮುಂದಿನ ದಿನಗಳಲ್ಲಿ ಶ್ರೀ ಮಂಜುನಾಥ ಸ್ವಾಮಿ ಶಿಕ್ಷೆ ನೀಡುವುದು ಖಚಿತ. ಆರಂಭಿಕ ಹಂತದಿಂದ ಕೂಡ ಸರ್ಕಾರ ಸರಿಯಾಗಿ ನಡೆದುಕೊಂಡಿಲ್ಲ. ಇಲ್ಲಿ ರಾಜಕೀಯ ಅಥವಾ ಧರ್ಮವನ್ನು ತರುವುದಿಲ್ಲ. ಆದರೆ ಕ್ಷೇತ್ರದ ಬಗ್ಗೆ ಸರ್ಕಾರ ನಡೆದುಕೊಂಡ ರೀತಿ ಮಾತ್ರ ಅಪಮಾನ ಉಂಟು ಮಾಡುವ ರೀತಿಯಲ್ಲಿ ನಡೆದುಕೊಂಡಿದೆ. ಇದು ಅಕ್ಷಮ್ಯ ಎಂದು ಅವರು ಹೇಳಿದರು.
ಆರಂಭದಿಂದಲೂ ತನಿಖೆಯ ನಾಟಕ ನಡೆದಿದೆ. ಸಿ.ಎಸ್. ದ್ವಾರಕಾನಾಥ್ ಎನ್ನುವ ವ್ಯಕ್ತಿ ಮೊದಲು ದೂರು ನೀಡಿರುತ್ತಾರೆ. ಅವರು ದೂರು ನೀಡಿದ ತಕ್ಷಣ ಮುಖ್ಯಮಂತ್ರಿಗಳು ಅತ್ಯಂತ ವೇಗವಾಗಿ ಕ್ರಮ ಕೈಗೊಂಡು ಎಸ್ ಐಟಿ ರಚನೆಗೆ ಆದೇಶ ಮಾಡುತ್ತಾರೆ. ಇದರ ಹಿಂದೆ ಕೆಲ ಎಡಪಂಥೀಯ ಶಕ್ತಿಗಳ ಹುನ್ನಾರದ ಜತೆಗೆ ಕಾಣದ ಶಕ್ತಿಗಳ ಬಹುದೊಡ್ಡ ಕುತಂತ್ರ ಅಡಗಿದೆ ಎಂದು ಅವರು ಆಪಾದಿಸಿದರು.
ಬಾನು ಮುಷ್ತಾಕ್ ವಿವಾದ ವಿಚಾರ
ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದಕ್ಕೆ ನನ್ನ ತಕರಾರು ಏನೂ ಇಲ್ಲ. ಆದರೆ ಈ ವಿಚಾರದಲ್ಲಿ ಕೆಲವರು ಉದ್ಧಟತನ ತೋರಿಸುತ್ತಿದ್ದಾರೆ. ಅದು ಬೇಡ ಎಂದು ಹೆಚ್.ಡಿ.ಕುಮಾರಸ್ವಾಮಿ ನೇರವಾಗಿ ಹೇಳಿದರು.
ತಾಯಿಯ ಮೆರವಣಿಗೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಇದಕ್ಕೆ ನನ್ನ ತಕರಾರು ಏನೂ ಇಲ್ಲ. ಆದರೆ ಕೆಲವರು ಈ ಬಗ್ಗೆ ಬಹಳ ಉದ್ಧಟತನದಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದು ಧಾರ್ಮಿಕ ಕ್ಷೇತ್ರದ ವಿಚಾರದಲ್ಲಿ ಬೇಡ, ಬೇಕಾಗಿಯೂ ಇಲ್ಲ. ಬಾನು ಮುಷ್ತಾಕ್ ಅವರಿಂದ ಪೂಜೆ ಮಾಡಿಸುವುದು ಬೇರೆ. ಆದರೆ ಚಾಮುಂಡೇಶ್ವರಿ ದೇಗುಲ ಹಿಂದೂಗಳ ಆಸ್ತಿಯಲ್ಲ ಅಂತಾರೆ. ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಈ ರೀತಿ ಅಪಚಾರ ಸರಿಯಲ್ಲ. ಇದು ಕಾಂಗ್ರೆಸ್ ಸರ್ಕಾರಕ್ಕೆ ಆಪತ್ತು ತರಲಿದೆ ಎಂಬುದನ್ನು ಮರೆಯಬಾರದು ಎಂದು ಅವರು ಕಟು ಶಬ್ದಗಳಲ್ಲಿ ಹೇಳಿದರು.
ರಾಜ್ಯದ ಡಿಸಿಎಂ ಆರ್ ಎಸ್ ಎಸ್ ಗೀತೆ ಹಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು; ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ. ತಮಾಷೆಗೂ ಆ ರೀತಿ ಹೇಳುವುದನ್ನು ಕಾಂಗ್ರೆಸ್ ನಾಯಕರು ಒಪ್ಪಲ್ಲ. ಈಗ ಅವರಿಗೆ ಕ್ಷಮೆ ಕೇಳುವ ಪರಿಸ್ಥಿತಿ ಎದುರಾಗಿದೆ ಎಂದರು ಕೇಂದ್ರ ಸಚಿವರು.
ರಾಜ್ಯದಲ್ಲಿ ವಿಪರೀತ ಮಳೆ ಆಗುತ್ತಿದೆ. ನೆರೆಯಿಂದ, ಬೆಳೆ ಹಾನಿಯಿಂದ ಜನರು ತತ್ತರಿಸುತ್ತಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸುವುದು ಬಿಟ್ಟು ಇಂಥ ವಿಷಯಗಳಲ್ಲಿ ಕಾಲಹರಣ ಮಾಡುತ್ತಿದೆ. ಅತ್ಯಂತ ನೋವಿನಿಂದ ನಾನು ಈ ಮಾತು ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						