
ಬೆಂ.ಗ್ರಾಂ.ಜಿಲ್ಲೆ: ಬೀದಿ ನಾಯಿ ಹಾವಳಿಯಿಂದ ಆಗುವ ಅನಾಹುತವನ್ನು ತಪ್ಪಿಸಲು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು (DC AB Basavaraju) ಅವರು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿ ದಯಾ ಸಂಘದ ನವೀಕರಣ ಹಾಗೂ ಸಂಚಾರಿ ಪಶುಚಿಕಿತ್ಸಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀದಿ ನಾಯಿಗಳ ಹಾವಳಿ ಮತ್ತು ಸಂತಾನ ನಿಯಂತ್ರಣದ ಬಗ್ಗೆ ಮಾತನಾಡುತ್ತಾ, 2025-26ನೇ ಸಾಲಿನಲ್ಲಿ ರೇಬಿಸ್ ಮಾಸಾಚರಣೆ ಚಟುವಟಿಕೆ ನಡೆಸಲು ಪ್ರಾಣಿ ಕಲ್ಯಾಣ ಮಂಡಳಿಯಿಂದ ಜಿಲ್ಲೆಗೆ 20 ಸಾವಿರ(ಪ್ರತಿ ತಾಲ್ಲೂಕಿಗೆ ರೂ. 5 ಸಾವಿರ) ಅನುದಾನ ನೀಡಲಾಗಿದೆ, ಇದರ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ನಗರಸಭೆ, ಪುರಸಭೆ ಹಾಗೂ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಾಡಬೇಕು. ಜಿಲ್ಲೆಯಲ್ಲಿ ಅನಗತ್ಯವಾಗಿ ಪ್ರಾಣಿಗಳನ್ನು ಬಳಸಿಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾಯಿ ತಳಿ ಸಂವರ್ಧನೆ ಮತ್ತು ಮಾರಾಟ ಕೇಂದ್ರಗಳು ಇದ್ದಲ್ಲಿ ಕಡ್ಡಾಯವಾಗಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ABC (ಪ್ರಾಣಿ ಜನನ ನಿಯಂತ್ರಣ) ಕಾಯ್ದೆ
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ಈ ಕಾಯ್ದೆಯಡಿ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳಿಗೆ ಕ್ರಿಮಿನಾಶಕ ಮತ್ತು ವ್ಯಾಕ್ಸಿನೇಷನ್ ಕಾರ್ಯಕ್ರಮಗಳನ್ನು ನಡೆಸುವುದನ್ನು ಕಡ್ಡಾಯಗೊಳಿಸುತ್ತವೆ. ಈ ಕಾಯ್ದೆಯನ್ನು 2001ರಲ್ಲಿ ಜಾರಿಗೊಳಿಸಲಾಯಿತು, ನಂತರ 2023ರಲ್ಲಿ ನಿಯಮಗಳನ್ನು ನವೀಕರಿಸಲಾಗಿದೆ,ಇದರ ಮುಖ್ಯ ಉದ್ದೇಶ ಹೆಚ್ಚುತ್ತಿರುವ ಬೀದಿ ನಾಯಿಗಳ ಜನನ ಪ್ರಮಾಣವನ್ನು ಕಡಿಮೆ ಮಾಡುವುದು, ರೇಬಿಸ್ ಕಾಯಿಲೆ ನಿರ್ಮೂಲನೆ ಮಾಡಲು
ನಾಯಿಗಳಿಗೆ ಲಸಿಕೆಗಳನ್ನು ಹಾಕುವುದು.
ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ಪ್ರಾಣಿ ವಧೆ ಮಾಡುವಂತಿಲ್ಲ, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಿ. ಸಾಧ್ಯವಾದಲ್ಲಿ ಹಸುಗಳಿಗೆ ಬೇಕಾದ ಮೇವುಗಳನ್ನು ಗೋಶಾಲೆಗಳ ಜಾಗದಲ್ಲಿ ಬೆಳೆಯಿರಿ.
ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಹೆಚ್ಚಿನ ಪ್ರೊತ್ಸಾಹ ಕಲ್ಪಿಸಿ, ಕೃಷಿಯಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು, ಕೊಟ್ಟಿಗೆ ಗೊಬ್ಬರ ಬಳಸಿ ಪೌಷ್ಠಿಕ ಆಹಾರ ಉತ್ಪನ್ನಗಳನ್ನು ಬೆಳೆಸುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು.
ಇತ್ತೀಚಿನ ದಿನಗಳಲ್ಲಿ ಸಗಣಿಯ ಬೆರಣಿಗೆ ಹೆಚ್ಚಿನ ಬೇಡಿಕೆಯಿದೆ, ಹಾಗಾಗಿ ಬೆರಣಿಯನ್ನು ಅಡುಗೆ ಮಾಡಲು ಮತ್ತು ಇತರ ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ಗೋ ಮೂತ್ರ ಮತ್ತು ಸಗಣಿಯಿಂದ ತಯಾರಿಸುವ ದೀಪಗಳು, ಸ್ಟಿಕ್ಕರ್ ಗಳು, ಅಲಂಕಾರಿಕ ವಸ್ತುಗಳು ಹಾಗೇ ಇನ್ನೂ ಹಲವಾರು ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದ್ದು, ಇವುಗಳ ಉತ್ಪಾದನೆ ಮಾಡಲು ತರಬೇತಿ ನೀಡಿದರೆ ಹಲವರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ.
ಮುಖ್ಯವಾಗಿ ನಮ್ಮಲ್ಲಿರುವ ಗೋಶಾಲೆಯಲ್ಲಿನ ಪಶುಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು, ಜೊತೆಗೆ ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ, ಬೆಣ್ಣೆ ಮತ್ತು ಸಗಣಿ ಹಾಗೂ ಗೋ ಮೂತ್ರದಿಂದ ವಸ್ತುಗಳನ್ನು ತಯಾರಿಸಲು ಪ್ರೋತ್ಸಾಹಧನ ನೀಡವುದರಿಂದ ಯುವಕರಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಸುಗಳಿಗೆ ವಿಮೆ ಮಾಡಿಸುವುದರಿಂದ ಅಕಾಲಿಕ ಮರಣ ಹೊಂದಿದರೆ ಪರಿಹಾರ ಸಿಗುತ್ತದೆ.
ಸಭೆಯಲ್ಲಿ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಜಗದೀಶ್ ಕುಮಾರ್, ಜಿಲ್ಲಾ ಪಶುವೈದ್ಯಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						