
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K. Shivakumar) ಅವರು ಚಾಮುಂಡಿ ಬೆಟ್ಟವು ಕೇವಲ ಹಿಂದೂಗಳ ಆಸ್ತಿಯಲ್ಲ ಎಂಬ ಮಾತನಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (D.K. Shivakumar) ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಕುಮಾರರು ಯಾರನ್ನೋ ಸಂತಸ ಪಡಿಸಲು ಹಾಗೂ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಈ ರೀತಿ ಹಿಂದೂಗಳಿಗೆ ಅಪಮಾನ ಮಾಡಿರುವುದನ್ನು ಹಿಂದೂ ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ದಸರಾ ಉತ್ಸವ, ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮೀಯರೂ ಭೇಟಿ ಕೊಡುತ್ತಾರೆಂಬುದು ನಮಗೂ ಗೊತ್ತಿದೆ. ಆದರೆ, ಇದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ ಎಂಬ ಹೇಳಿಕೆ ಹಿಂದೂಗಳಿಗೆ ಮಾಡಿದ ಅಪಮಾನ; ಇದು ಅಕ್ಷಮ್ಯ ಅಪರಾಧ ಎಂದು ವಿಶ್ಲೇಷಿಸಿದರು.
ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ನಮಸ್ತೇ ಸದಾ ವತ್ಸಲೇ ಗೀತೆ ಹೇಳಿದರು. ತಕ್ಷಣ ದೆಹಲಿ ಹೈಕಮಾಂಡಿನ ಒತ್ತಡ ಬಂದು ಕ್ಷಮಾಪಣೆ ಕೇಳುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡಿನದು ಒಡೆದಾಳುವ ನೀತಿಯ ಸಂಸ್ಕೃತಿ. ಹಾಗಾಗಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಪದೇಪದೇ ಹಿಂದೂಗಳ ಅಪಮಾನ, ಹಿಂದೂ ಕಾರ್ಯಕರ್ತರ ಅವಮಾನ, ನಮ್ಮ ಪರಂಪರೆಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಅಷ್ಟೆಲ್ಲ ಅಪಪ್ರಚಾರ ನಡೆಯುತ್ತಿದ್ದರೂ ಬಾಯಿ ಮುಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಲಿಲ್ಲ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿ ಆಗುವ ಕನಸು ನನಸಾಗಲು
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದು, ಆ ಕನಸು ನನಸಾಗಲಿ ಎಂಬ ದೃಷ್ಟಿಯಿಂದ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ತಮಗೆ ಅನಿಸುತ್ತಿರುವುದಾಗಿ ಹೇಳಿದರು. ಇದೇ ಡಿ.ಕೆ.ಶಿವಕುಮಾರ್ ಅವರು ಗಾಂಧಿ ಕುಟುಂಬವನ್ನು ಖುಷಿಪಡಿಸಲು ರಾಮನಗರದಲ್ಲಿ ಏಸುಕ್ರಿಸ್ತನ 115 ಅಡಿಯ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದರು ಎಂದು ವಿಜಯೇಂದ್ರ ಅವರು ಟೀಕಿಸಿದರು.
ವನವಾಸದ ಸಂದರ್ಭದಲ್ಲಿ ಶ್ರೀರಾಮನು ರಾಮನಗರಕ್ಕೆ ಬಂದು ಹೋಗಿದ್ದ, ನೆಲೆಸಿದ್ದ ಎಂಬ ಬಲವಾದ ನಂಬಿಕೆ ಹಿಂದೂಗಳಲ್ಲಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದರೂ ಹೇಳುತ್ತೇವೆ; ಏನು ಬೇಕಾದರೂ ಮಾತನಾಡುತ್ತೇವೆ ಎಂಬ ಧೋರಣೆ ಸರಿಯಲ್ಲ. ಭಗವಂತನೂ ಖಂಡಿತವಾಗಿ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.
ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ಪಕ್ಷದ ನಾಯಕರ ನಡವಳಿಕೆಗಳು, ಹಿಂದೂಗಳ ಭಾವನೆಗೆ ಧಕ್ಕೆ ತರುವುದು, ಹಿಂದೂ ಧರ್ಮದ ಕುರಿತ ಅವರ ಹೇಳಿಕೆಗಳನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಚಾಮುಂಡಿ ಬೆಟ್ಟದ ಕುರಿತು ತಮ್ಮ ಹೇಳಿಕೆಯನ್ನು ಡಿ.ಕೆ.ಶಿವಕುಮಾರ್ ಅವರು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಬೇಕೆಂದು ಅನಿಸುತ್ತದೆ. ಬಾನು ಮುಷ್ತಾಕ್ ಅವರ ಜೊತೆಗೇ ದೀಪಾ ಭಸ್ತಿ ಅವರಿಗೂ ಪ್ರಶಸ್ತಿ ಲಭಿಸಿದೆ. ಅವರನ್ನು ಕರೆಯಬೇಕೆಂದು ಮುಖ್ಯಮಂತ್ರಿಗಳಿಗೆ ಯಾಕೆ ಅನಿಸಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರದ ಅಜೆಂಡಾ ಏನು? ಎಂದು ಕೇಳಿದರು. ನಿಸಾರ್ ಅಹ್ಮದ್ ಅವರೂ ದಸರಾ ಉದ್ಘಾಟಿಸಿದ್ದರು. ಅದು ಬೇರೆ ಪ್ರಶ್ನೆ. ಬಾನು ಮುಷ್ತಾಕ್ ಅವರು ನಮ್ಮ ಸಂಸ್ಕøತಿ, ಪರಂಪರೆ, ಎಲ್ಲ ಆಚಾರ ವಿಚಾರಗಳನ್ನು ಒಪ್ಪಿ ಬರುವುದಾದರೆ ಅದನ್ನು ನಾವು ಒಪ್ಪಿಕೊಳ್ಳುವುದಾಗಿ ಹೇಳಿದ್ದೇನೆ ಎಂದರು.
ದಸರಾ ಎಂಬುದು ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಲ್ಲ; ಇದು ನಮ್ಮ ಹಿಂದೂ ಸಂಸ್ಕೃತಿ, ಹಿಂದೂ ಪರಂಪರೆಯ ಪದ್ಧತಿ. ರಾಜ ಮಹಾರಾಜರ ಕಾಲದಿಂದ ಈ ಪದ್ಧತಿ ಬಂದಿದೆ ಎಂದು ವಿವರಿಸಿದರು. ಹಿಂದೂಗಳ ಭಾವನೆಗೆ ಧಕ್ಕೆ ಬರಬಾರದೆಂಬುದು ನಮ್ಮೆಲ್ಲರ ಉದ್ದೇಶ ಎಂದು ನುಡಿದರು. ಹಿಂದೂ ಸಂಸ್ಕೃತಿ ಪರಂಪರೆಗೆ ಧಕ್ಕೆ ತರುವ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಬಾರದು ಎಂದು ಆಗ್ರಹವನ್ನು ಮುಂದಿಟ್ಟರು.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಗೃಹ ಸಚಿವರು ಮಂಗಳೂರಿಗೆ ಹೋಗಿದ್ದರು. ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಲು ಹೊರಟ ಸಂದರ್ಭದಲ್ಲಿ ಯಾವುದೋ ಒಂದು ಕೋಮಿಗೆ ಸೇರಿದ ನಾಯಕರು ಹೋಗಬಾರದೆಂದು ಕಟ್ಟಿ ಹಾಕುವ ಕೆಲಸ ಮಾಡಿದ್ದರು. ಗೃಹ ಸಚಿವರು ಹಾಗೇ ವಾಪಸಾದರು. ಅಂದರೆ, ರಾಜ್ಯ ಸರಕಾರದ ನಡವಳಿಕೆಯನ್ನು ಪ್ರತಿ ಸಂದರ್ಭದಲ್ಲೂ ಗಮನಿಸಿದರೆ, ಪ್ರತಿ ಬಾರಿಯೂ ಹಿಂದೂಗಳಿಗೆ ಅಪಮಾನ ಮಾಡುವ ನಿರ್ಧಾರವನ್ನೇ ಕಾಂಗ್ರೆಸ್ ಸರಕಾರವು ತೆಗೆದುಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು.
ಅಪಪ್ರಚಾರ ನಡೆಸಿದವರನ್ನು ಬಂಧಿಸಿಲ್ಲವೇಕೆ?
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಹಿಂದೂಗಳ ವಿರುದ್ಧ ಕೇಸ್ ದಾಖಲಿಸಿ, 24 ಗಂಟೆಗಳಲ್ಲಿ ಬಂಧಿಸುತ್ತಾರೆ. ಆದರೆ, ಧರ್ಮಸ್ಥಳದ ವಿಷಯದಲ್ಲಿ ಹಿಂದೂ ಭಾವನೆಗೆ ಧಕ್ಕೆ ತರುವಂತೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆದರೂ ಅವರ ವಿರುದ್ಧ ಕೇಸ್ ಹಾಕಿ ಬಂಧಿಸಬೇಕೆಂದು ಯಾಕೆ ಕಾಂಗ್ರೆಸ್ ಸರಕಾರಕ್ಕೆ ಅನಿಸಿಲ್ಲ ಎಂದು ಪ್ರಶ್ನಿಸಿದರು.
ಎಸ್‍ಐಟಿ ತನಿಖೆ ಮಾಡಿಕೊಳ್ಳಲಿ; ದುಷ್ಟ ಶಕ್ತಿಗಳ ಹಿಂದಿರುವ ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟದ ದುಷ್ಟ ಶಕ್ತಿಗಳ ಬಗ್ಗೆ ತಿಳಿಯಲು ಮತ್ತು ಅವರನ್ನು ಹೊರಕ್ಕೆ ತರಲು ಎನ್‍ಐಎ, ಸಿಬಿಐ ತನಿಖೆ ಆಗಬೇಕೆಂಬ ಆಗ್ರಹ ಭಕ್ತರದ್ದೂ ಆಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಸರಕಾರಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ಕಾಳಜಿ, ಪ್ರಾಮಾಣಿಕತೆ ಇದ್ದಲ್ಲಿ, ಹಿಂದೂಗಳ ಧಾರ್ಮಿಕ ಶ್ರದ್ಧೆ ಬಗ್ಗೆ ಕಿಂಚಿತ್ತಾದರೂ ನಂಬಿಕೆ ಇದ್ದರೆ, ಎಸ್‍ಐಟಿ ತನಿಖೆ ಆಗಲಿ; ಆದರೆ, ಅದಕ್ಕೊಂದು ಕಾಲಮಿತಿ ಬೇಕಲ್ಲವೇ ಎಂದು ಪ್ರಶ್ನಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತ ಈ ಹುಚ್ಚಾಟ ಇನ್ನೆಷ್ಟು ದಿನ ಮುಂದುವರೆಸುತ್ತೀರಿ ಎಂದು ಕೇಳಿದರು. ಅಪಪ್ರಚಾರ ಮಾಡುವವರ ವಿರುದ್ಧ ಒಂದೂ ಎಫ್‍ಐಆರ್ ಮಾಡದ ಕಾಂಗ್ರೆಸ್ ಸರಕಾರದ ಬಗ್ಗೆ ನಮಗೆ ವಿಶ್ವಾಸ ಇಲ್ಲ; ಷಡ್ಯಂತ್ರ ಮಾಡಿದ್ದು ಯಾರು? ಅಪಪ್ರಚಾರ ಮಾಡಿದ್ದು ಯಾರು? ದುಷ್ಟ ಶಕ್ತಿಗಳಿಗೆ ಹಣ ಕೊಟ್ಟವರು ಯಾರು? – ಇವೆಲ್ಲವೂ ಸಮಗ್ರ ತನಿಖೆ ಆಗಲಿ ಎಂದು ತಿಳಿಸಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						