ದೊಡ್ಡಬಳ್ಳಾಪುರ: ಮಕ್ಕಳ ರಕ್ಷಣಾ ಆಯೋಗದ (Child Protection Commission) ಸದಸ್ಯ ಶಶಿಧರ್ ಕೋಸುಂಬೆ ಹಾಗೂ ಶೇಖರ್ ಗೌಡರ್ ಇಂದು ತಾಲೂಕಿನ ಸರ್ಕಾರಿ ಆಸ್ಪತ್ರೆ, ವಿವಿಧ ಪೊಲೀಸ್ ಠಾಣೆ ಹಾಗೂ ಗ್ರಾಮಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂತೆಯೇ ನಗರದ ಜಿ.ರಾಮೇಗೌಡ ವೃತ್ತದ ಸಮೀಪ ಇರುವ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅಧಿಕಾರಿಗಳು, ಇಲ್ಲಿನ ವ್ಯವಸ್ಥೆಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಈ ವೇಳೆ ಮಹಿಳಾ ಪೊಲೀಸ್ ಠಾಣೆ ಜನಸ್ನೇಹಿಯಾಗಿದೆಯಾದರೂ ಮಕ್ಕಳ ಸ್ನೇಹಿಯಾಗಿಲ್ಲವೆಂದ ಅವರು, ಸೂಕ್ತ ಮಾರ್ಪಾಡು ಮಾಡುವಂತೆ ಸಲಹೆ ನೀಡಿದರು.

ಈ ಸಲಹೆ ಬೆನ್ನಲ್ಲೇ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ನೇತೃತ್ವದ ಸಿಬ್ಬಂದಿಗಳು, ಮಕ್ಕಳ ಸ್ನೇಹಿಯನ್ನಾಗಿಸಲು ಆಟಿಗಳು, ವಿವಿಧ ಫಲಕಗಳನ್ನು ಅಳವಡಿಸಿ, ವಾಟ್ಸಪ್ ಮೂಲಕ ಬದಲಾವಣೆಯನ್ನು ಆಯೋಗದ ಸದಸ್ಯರಿಗೆ ತಿಳಿಸಿದರು.

ಮಹಿಳಾ ಪೊಲೀಸ್ ಠಾಣೆಯ ಕ್ರಿಯಾಶೀಲತೆ ಗಮನಿಸಿದ ಅಧಿಕಾರಿಗಳು ರಾಜ್ಯದ ಇತರೆ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಇದೇ ಮಾದರಿ ಅನುಸರಿಸುವಂತೆ ಸೂಚನೆ ನೀಡುವುದಾಗಿ ಹೇಳಿದ್ದಾರೆಂದು ತಿಳಿದುಬಂದಿದೆ.
