ಬೆಂಗಳೂರು ಗ್ರಾಮಾಂತರ ಜಿಲ್ಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜಾತ್ಯತೀತ ಜನತಾದಳ (JDS) ವತಿಯಿಂದ ಆಯೋಜಿಸಿರುವ “ಧರ್ಮಸ್ಥಳ ಸತ್ಯ ಯಾತ್ರೆಗೆ” (Dharmasthala Satya Yatre) ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಕರೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈ ಯಾತ್ರೆಯನ್ನು ಆಯೋಜಿಸಲಾಗಿದೆ.
ಇದೇ ಭಾನುವಾರ 31 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದೇವೆ. ಧರ್ಮಸ್ಥಳಕ್ಕೆ ಅಪಮಾನ ಆಗುವ ತರ ಕೆಲವೊಂದು ಹೆಜ್ಜೆ ಈ ಸರ್ಕಾರ ಇಟ್ಟಿದೆ. ನಾನು ಒಬ್ಬ ಭಕ್ತನಾಗಿ ಹಾಗೂ ನಮ್ಮ ಪಕ್ಷ ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಧರ್ಮಸ್ಥಳ ಸತ್ಯ ಯಾತ್ರೆ ಮಾಡಿ, ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
800 ವರ್ಷಗಳ ಇತಿಹಾಸವಿರುವ ಪುಣ್ಯಕ್ಷೇತ್ರ ಧರ್ಮಸ್ಥಳ. ಕೋಟ್ಯಾಂತರ ಭಕ್ತರು ಶ್ರೀ ಕ್ಷೇತ್ರಕ್ಕೆ ಹೋಗ್ತಾರೆ. ಧರ್ಮಸ್ಥಳದಲ್ಲಿ ಧರ್ಮ, ನ್ಯಾಯವಿದೆ ಇಂತಹ ಶ್ರೀ ಕ್ಷೇತ್ರ ಬಗ್ಗೆ ಪಿತೂರಿ ನಡೆದಿದೆ. ಇದರ ಹಿಂದೆ ಒಂದು ಸಂಘಟನೆ ಇದೆ ಎಂದು ಮುನೇಗೌಡ ಅವರು ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಸ್ವಂತ ವಾಹನಗಳಲ್ಲಿ “ಧರ್ಮಸ್ಥಳ ಸತ್ಯ ಯಾತ್ರೆ”ಯಲ್ಲಿ ಭಾಗವಹಿಸಲಿದ್ದೇವೆ ಎಂದರು.
ದೊಡ್ಡಬಳ್ಳಾಪುರ ಜೆಡಿಎಸ್ ತಾಲೂಕು ವಕ್ತಾರ ಕುಂಟನಹಳ್ಳಿ ಮಂಜುನಾಥ್ ಮಾತನಾಡಿ, ಧರ್ಮಸ್ಥಳ ಯಾತ್ರೆಯಲ್ಲಿ ಯಾವುದೇ ರಾಜಕೀಯ ಇಲ್ಲ. ಪಕ್ಷಾತೀತವಾಗಿ ಈ ಯಾತ್ರೆ ಕೈಗೊಂಡಿದ್ದೇವೆ. ಇದ್ರಲ್ಲಿ ಯಾವುದೇ ರಾಜಕೀಯವಿಲ್ಲ. ಧರ್ಮಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತೇವೆ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಕ್ಕೆ ಒಂದುವರೆ ತಿಂಗಳಿಂದ ಮಾನಸಿಕ ಹಿಂಸೆ ನೀಡಿದ್ದರು. ಆದರೆ ಅವರ ಕುಟುಂಬದವರು ತಾಳ್ಮೆ ಮತ್ತೆ ಸಹನೆಯಿಂದ ನಡೆದುಕೊಂಡಿದ್ದಾರೆ. ನಾವು ಅವರ ಜೊತೆ ನಿಲ್ಲುತ್ತೇವೆ ಹೆಗ್ಗಡೆ ಕುಟುಂಬಕ್ಕೆ ಜೆಡಿಎಸ್ ಬೆಂಬಲವಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಿಂದ ಮಾಜಿ ಶಾಸಕ ಸಿ.ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಕಾರಳ್ಳಿ ಮುನೇಗೌಡ, ಹೊಸಕೋಟೆ ತಾಲೂಕಿನಿಂದ ಅಧ್ಯಕ್ಷ ಶ್ರೀಧರ್, ದೊಡ್ಡಬಳ್ಳಾಪುರ ತಾಲೂಕಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ ಹಾಗೂ ನೆಲಮಂಗಲ ತಾಲೂಕಿನಿಂದ ಮಾಜಿ ಶಾಸಕ ಶ್ರೀನಿವಾಸ್ ಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹುಸ್ಕೂರು ಆನಂದ್, ಡಾ.ವಿಜಯಕುಮಾರ್ ಅವರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದೇವೆ.
ಆಗಸ್ಟ್. 31ರಂದು ಬೆಳಗ್ಗೆ 7.30ಕ್ಕೆ ಹಾಸನದಲ್ಲಿ ಸೇರುವಂತೆ ಕಾರ್ಯಕರ್ತರಿಗೆ ಮಾಹಿತಿ ನೀಡಲಾಗಿದೆ. ಬಳಿಕ ನೇತ್ರಾವತಿ ಬಳಿ ಸೇರಿ, ಅಲ್ಲಿಂದ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳಲಿದ್ದೇವೆ ಎಂದರು.