ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆ (Ganesh immersion procession) ವೇಳೆ ಸಂಭವಿಸಿದ ಪಟಾಕಿ ಅವಘಡದಲ್ಲಿ (Firecracker mishap) ಓರ್ವ ಬಾಲಕ ಸಾವನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಮುತ್ತೂರಿನಲ್ಲಿ ಸಂಭವಿಸಿದೆ.
ಮೃತ ದುರ್ದೈವಿ ಬಾಲಕನನ್ನು 15 ವರ್ಷದ ತನುಷ್ ರಾವ್ ಎಂದು ಗುರುತಿಸಲಾಗಿದೆ.
ಇಂದು ಸಂಜೆ ಸಂಭವಿಸಿದ ಪಟಾಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡ ತನುಷ್ ರಾವ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ವಿದ್ಯಾರ್ಥಿಗಳಾದ ಗಣೇಶ್, ಯೋಗೇಶ, ಪವರ್ ಲಿಫ್ಟರ್ ಚಾಲಕ ಮುನಿರಾಜು, ನಾಗರಾಜು,
ಚೇತನ್ ಶಾವಿ ಎಂಬುವರಿಗೆ ಸುಟ್ಟ ಗಾಯಗಳಾಗಿವೆ.
ಇದೇ ವೇಳೆ ಬಂದೋಬಸ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಜಾಕಿರ್ ಹುಸೇನ್ ಎಂಬುವರ ಕೈಗೆ ಪಟಾಕಿ ಸಿಡಿದು ಸುಟ್ಟಗಾಯಗಳಾಗಿದ್ದು, ಸಮೀಪದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇಂದು ಸಂಜೆ 5.30ರ ವೇಳೆ ಫ್ರೆಂಡ್ಸ್ ವಿನಾಯಕ ಗ್ರೂಪ್‌ವತಿಯಿಂದ ಗಣೇಶ ವಿಸರ್ಜನೆಗೆಂದು ಟ್ರಾಕ್ಟರ್‌ನಲ್ಲಿ ಮೆರವಣಿಗೆ ಬರುವ ವೇಳೆ, ಮೆರವಣಿಗೆ ಮಾಡಲು ಕರೆಸಲಾಗಿದ್ದ ಪವರ್ ಲಿಪ್ಟರ್ ವಾಹನ ಬಿಸಿಯಾಗಿ, ಅದರ ಮೇಲೆ ಇಡಲಾಗಿದ್ದ ಪಟಾಕಿಗಳ ಏಕಾಏಕಿ ಸ್ಪೋಟಗೊಂಡಿವೆ.
ಸ್ಥಳಕ್ಕೆ ಎಸ್ಪಿ ಸಿಕೆ ಬಾಬಾ, ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್, ಡಿವೈಎಸ್ಪಿ ರವಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಗೆ ತೆರಳಿ ದಾಖಲಾದವರೊಂದಿಗೆ ಮಾತುಕತೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.