ದೊಡ್ಡಬಳ್ಳಾಪುರ: ನಿನ್ನೆ ಸಂಜೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುತ್ತೂರಿನಲ್ಲಿ (Muttur) ಸಂಭವಿಸಿದ ಪಟಾಕಿ ಅವಘಡದ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಭೇಟಿ ನೀಡಿದರು.

ಈ ವೇಳೆ ಅಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದ ಅವರು, ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿ, ಧೈರ್ಯ ತುಂಬಿದರು. ಬಳಿಕ ವೈದ್ಯರೊಂದಿಗೆ ಚರ್ಚಿಸಿ ಗಾಯಾಳುಗಳ ಆರೋಗ್ಯಕ್ಕೆ ಸಂಬಂಧಿಸಿ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದರು.
ನಂತರ ಮಾತನಾಡಿ ಈ ರೀತಿಯ ಘಟನೆಗಳು ಮುಂದೆ ಆಗಬಾರದು. ಜಿಲ್ಲೆಯಾದ್ಯಂತ ಗಣೇಶ ಕೂರಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಆಯೋಜಕರಿಗೆ ಪಟಾಕಿ ಸಿಡಿಸದಂತೆ ಸೂಚನೆ ನೀಡಿ ಜೊತೆಗೆ ಗಣೇಶ ವಿಸರ್ಜನೆ, ಮೆರವಣಿಗೆ, ಸಂಭ್ರಮ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಹಾಗೇ ಜಿಲ್ಲೆಯಲ್ಲಿ ಇನ್ನೂ ಮುಂದೆ ಇನ್ನಿತರೇ ಯಾವುದೇ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಡಿವೈಎಸ್ಪಿ ರವಿ ಅವರು ಘಟನೆಯ ಕುರಿತು ವಿವರಿಸಿದ್ದು, ಪಟಾಕಿ ನಿಷೇಧ ಹೇರಿರುವ ಮಾಹಿತಿ ತಿಳಿಸಿದರು.
ಈ ವೇಳೆ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜಣ್ಣ, ಕಾಂಗ್ರೆಸ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಶರತ್ ಪಟೇಲ್, ತೂಬಗೆರೆ ಹೋಬಳಿ ಅಧ್ಯಕ್ಷ ರಂಗಪ್ಪ, ಎಸಿ ಎನ್ ದುರ್ಗಾಶ್ರೀ, ಇನ್ಸ್ಪೆಕ್ಟರ್ ಅಮರೇಶ್ ಗೌಡ ಮತ್ತಿತರರಿದ್ದರು.