ಬೆಂಗಳೂರು: ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ (Rao Ganesh Janardhan) ಅವರು ರಾಷ್ಟ್ರಪತಿ ಪದಕವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು.
ಇಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭ 2025 ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪದಕವನ್ನು ವಿತರಣೆ ಮಾಡಿದರು.
ಈ ವೇಳೆ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಡಾ.ಜಿ.ಪರಮೇಶ್ವರ್ ಮತ್ತಿತರರಿದ್ದರು.

ರಾವ್ ಗಣೇಶ್ ಜನಾರ್ಧನ್ ಅವರು 2003 ರಲ್ಲಿ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದು, ಸೇವೆಗೆ ಸೇರಿದಾಗಿನಿಂದಲೂ ಕಳಂಕವಿಲ್ಲದ ಶ್ರದ್ದೆ, ನಿಷ್ಟೆ ಮತ್ತು ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ.
2005 ರಲ್ಲಿ ಬೆಂಗಳೂರು ನಗರದ ನಿಯಂತ್ರಣ ಕೋಣೆಗೆ ಸ್ಥಳ ನಿಯುಕ್ತಿಗೊಂಡಾಗ ನಿಯಂತ್ರಣ ಕೋಣೆಗೆ ಬರುವ ಪ್ರಮುಖ ಕರೆಗಳನ್ನು ಸಮಯ ಪ್ರಜ್ಞೆಯಿಂದ ಹಾಗೂ ಕಾಲವಿಳಂಬವಿಲ್ಲದೇ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಪರಾಧಗಳನ್ನು ತಡೆಗಟ್ಟಲು ಶ್ರಮವಹಿಸಿದ್ದಾರೆ.

ಆನಂತರ 2005ನೇ ಡಿಸೆಂಬರ್ 28 ರಂದು ಭಾರತ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಗುಂಡಿನ ದಾಳಿಯ ಪ್ರಕರಣವನ್ನು ತನಿಖೆ ನಡೆಸುವಲ್ಲಿ ತನಿಖಾ ತಂಡದ ಸದಸ್ಯರಾಗಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
2006 ರಲ್ಲಿ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಸರಹದ್ದಿನಲ್ಲಿ ಸಾರ್ವಜನಿಕರಿಗೆ ಹಲವು ತರಬೇತಿ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಇವರ ಪರಿಶ್ರಮದಿಂದ ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012ನೇ ಸಾಲಿನಲ್ಲಿ ಅತ್ಯಂತ ಕಡಿಮೆ ಅಪಘಾತಗಳು ಮತ್ತು ಅಪಘಾತ ಸಾವುಗಳು ದಾಖಲಾಗಿರುತ್ತವೆ.
ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆ, ಚಾಲಹಳ್ಳಿ ಸಂಚಾರ ಪೊಲೀಸ್ ಠಾಣೆ, ಅಶೋಕನಗರ ಸಂಚಾರ ಪೊಲೀಸ್ ಠಾಣೆ, ಹೆಚ್.ಎಸ್.ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಗಳಲ್ಲಿ ಅಪಾರ ಶ್ರಮವಹಿಸಿ, ಸುಗಮ ಸಂಚಾರಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಚಾರ ಸುಗಮಗೊಳಿಸಿರುತ್ತಾರೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಪಘಾತಗಳನ್ನು ತಡೆಯುವಲ್ಲಿ ಮತ್ತು ಪ್ರಾಣಹಾನಿಗಳನ್ನು ತಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
ಎಸ್.ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಮಾಡಿರುತ್ತಾರೆ ಹಾಗೂ ಅಪರಾಧಗಳನ್ನು ತಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
ಆನಂತರ ನಗರ ವಿಶೇಷ ಶಾಖೆಗೆ ವರ್ಗಾವಣೆಗೊಂಡ ಇವರು ಪೊಲೀಸ್ ಪರಿಶೀಲನಾ ಪತ್ರಗಳು, ಪೊಲೀಸ್ ನಿರಾಕ್ಷೇಪಣಾ ಪತ್ರಗಳ ಗಣಕೀಕರಣಕ್ಕೆ ಶ್ರಮಿಸಿರುತ್ತಾರೆ. ಇದರಿಂದಾಗಿ ಸಾರ್ವಜನಿಕರು ಪಿ.ಸಿ.ಸಿ, ಪಿ.ವಿ.ಸಿ ಪತ್ರಗಳನ್ನು ಪಡೆಯಲು ಪ್ರಕ್ರಿಯೆ ಸರಳೀಕರಣವಾಗಿರುತ್ತದೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾವಣೆಗೊಂಡು ಅಲ್ಲಿಯೂ ಸಹ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ ಇವರು ಹಿರಿಯ ಅಧಿಕಾರಿಗಳ ಪ್ರಶಂಸೆಗೊಳಗಾಗಿರುತ್ತಾರೆ.
ಇವರ ಇಲ್ಲಿಯವರೆಗೆ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷತೆ, ವೃತ್ತಿ ನಿಷ್ಠೆ, ಪ್ರಾಮಾಣಿಕತೆಯಿಂದ ಸಲ್ಲಿಸಿದ ಸೇವೆಯನ್ನು ಮೆಚ್ಚಿ ರಾಷ್ಟ್ರಪತಿಗಳು 2013ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಶ್ಲಾಘನೀಯ ಸೇವಾ ಪದಕವನ್ನು ನೀಡಿ ಗೌರವಿಸಿದ್ದಾರೆ.