ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ (Gram Panchayat President) ವಿವಾಹವಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಬಸಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಭೀಮಶಿ ಕಾಲಿಮಣಿ ಎಂಬಾತನಿಂದ ಈ ಕೃತ್ಯ ನಡೆದಿದೆ.
ಹುಕ್ಕೇರಿ ತಾಲೂಕಿನ ಯಮಕನ ಮರಡಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. 2023 ನವೆಂಬರ್ 5 ರಂದು ಅಪ್ರಾಪ್ತ ಜತೆಗೆ ಭೀಮಶಿ ಕಾಲಿಮಣಿ ವಿವಾಹವಾಗಿದ್ದ. ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಗ್ರಾಮಪಂಚಾಯಿತಿ ಅಧ್ಯಕ್ಷ ಭೀಮಶಿ ಕಳ್ಳಾಟ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ಬಂಧನದ ಭೀತಿಯಿಂದ ಪತ್ನಿಯ ನಕಲಿ ಜನನ ಪ್ರಮಾಣ ಪತ್ರ ವೈರಲ್ ಮಾಡಿದ್ದ. ಶಾಲಾ ದಾಖಲಾತಿ ಪತ್ರದ ಜೊತೆಗೆ ಹೊಸ ಜನನ ಪ್ರಮಾಣದ ದಾಖಲೆ ಹೋಲಿಕೆ ಮಾಡಿದ ಅಧಿಕಾರಿಗಳು ಈ ವೇಳೆ ಗ್ರಾಪಂ ಅಧ್ಯಕ್ಷ ಭೀಮಶಿ ಕಾಲಿಮಣಿ ಬಾಲ್ಯ ವಿವಾಹ ಆಗಿರುವುದು ದೃಢವಾಗಿದೆ.
ಕೃತ್ಯ ಎಸಗಿರುವುದು ದೃಢವಾದ ಹಿನ್ನೆಲೆಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷನ ವಿರುದ್ಧ ಪೋಕೋ ಕೇಸ್ ದಾಖಲಾಗಿದೆ.
ಈ ಕುರಿತಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯೆ ನೀಡಿದ್ದು, ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಅಪ್ರಾಪ್ತ ಪ್ತಿಯನ್ನು ವಿವಾಹವಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಮೂಲಕ ಈಗಾಗಲೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಾನೂನು ಕ್ರಮ ಮುಂದುವರಿಯಲಿದೆ ಎಂದಿದ್ದಾರೆ.