ಹಾಸನ (Hassan): ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುಮಾರು 8-00 ರಿಂದ 8-30 ಸುಮಾರಿಗೆ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿರುವಾಗ ಮೈಸೂರು ಹಾಸನ ಹೆದ್ದಾರಿಯಲ್ಲಿ ಹಾಸನದ ಕಡೆಯಿಂದ ಬಂದ ಲಾರಿಯು ಡಿಕ್ಕಿ ಹೊಡೆದ ಪರಿಣಾಮ 09 ಜನ ಸಾವನಪ್ಪಿದ್ದಾರೆ.
ಮೃತರ ವಿವರ: ಪ್ರವೀಣ್ ಕುಮಾರ್ (21 ವರ್ಷ), ರಾಜೇಶ್ (17 ವರ್ಷ), ಈಶ್ವರ್ (17 ವರ್ಷ), ಗೋಕುಲ್ (17 ವರ್ಷ), ಕುಮಾರ್ (25 ವರ್ಷ), ಪ್ರವೀಣ್ (25 ವರ್ಷ), ಮಿಥುನ್ (23 ವರ್ಷ), ಸುರೇಶ್ (22), ಪ್ರಭಾಕರ್ (52 ವರ್ಷ) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ 17 ಜನ ಗಾಯಗೊಂಡು ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ಮಂಗಳಾ ಆಸ್ಪತ್ರೆಯಲ್ಲಿ ಇಬ್ಬರು ಮತ್ತು ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಂಭವಿಸಿದ ಭೀಕರ ಅಪಘಾತದ ಹಿನ್ನೆಲೆಯಲ್ಲಿ ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾತ್ರಿಯಿಡೀ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಘಟನೆ ನಡೆದ ಕ್ಷಣದಿಂದ ರಾತ್ರಿಯಿಡೀ ಅಧಿಕಾರಿಗಳ ತಂಡ-ವೈದ್ಯರ ತಂಡಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ತೀವ್ರ ನಿಗಾ ವಹಿಸಿದ್ದಾರೆ.
ಮೃತರ ಕುಟುಂಬಗಳ ಜೊತೆ ಸತತ ಸಂಪರ್ಕದಲ್ಲಿದ್ದ ಅಧಿಕಾರಿಗಳು ಮೃತರ ಮರಣೋತ್ತರ ಪರೀಕ್ಷೆ ರಾತ್ರಿಯೇ ನಡೆಯಲು ಬೇಕಾದ ಅಗತ್ಯ ಕ್ರಮ ಕೈಗೊಂಡರು. ವೈದ್ಯರ ತಂಡ ಬೆಳಗಾಗುವವರೆಗೂ ಕಾಯದೇ ರಾತ್ರಿಯೇ ಮರಣೋತ್ತರ ಪರೀಕ್ಷೆ ಮತ್ತು ಕಾನೂನು ಪ್ರಕ್ರಿಯೆ ಮುಗಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.
ಗಾಯಾಳುಗಳ ಚಿಕಿತ್ಸೆಗೆ ಖುದ್ದಾಗಿ ಜಿಲ್ಲಾ ವೈದ್ಯಾಧಿಕಾರಿಗಳೇ ಉಸ್ತುವಾರಿ ವಹಿಸಿದ್ದು, ಅಗತ್ಯ ವೈದ್ಯರ ತಂಡವನ್ನು ರಚಿಸಿದ್ದಾರೆ. ಅಗತ್ಯವಾದ ಎಲ್ಲಾ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಯವರ ಜೊತೆ ನಿರಂತರ ಸಂಪರ್ಕದಲ್ಲಿರುವ ಉಸ್ತುವಾರಿ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದು, ಮೃತರ ಕುಟುಂಬದವರ ಜೊತೆಗೂ ಮಾತನಾಡುತ್ತಿದ್ದಾರೆ.
ಘಟನೆ ಸಂಭವಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.