ದೊಡ್ಡಬಳ್ಳಾಪುರ ( Doddaballapura): ತಾಲೂಕಿನಲ್ಲಿ ಕೆಲ ದಿನಗಳಿಂದ ತಣ್ಣಗಿದ್ದ ಸುಲಿಗೆಕೋರರು ಮತ್ತೆ ಬಾಲ ಬಿಚ್ಚಲಾರಂಭಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಚಾಲಕರು ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ, ಹಣ, ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗಿನ ಜಾವ ಆಲಹಳ್ಳಿ ಬಳಿ ನಡೆದಿದೆ.
ಆಟೋದಲ್ಲಿ ಬಂದಿರುವ 6 ಮಂದಿ ದುಷ್ಕರ್ಮಿಗಳು ಎರಡು ವಾಹನಗಳ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ.
ಘಟನೆಯಲ್ಲಿ ಕೋಲಾರ ಮೂಲದ ಮುನಿರಾಜು (33 ವರ್ಷ) ಎನ್ನುವವರು ಕ್ಯಾಂಟರ್‌ನಲ್ಲಿ ನೆಲಮಂಗಲದ ದಾಸರಯ್ಯನ ಪುರದ ಮಾರುಕಟ್ಟೆ ತರಕಾರಿ ಅನ್‌ಲೋಡ್ ಮಾಡಿ ಬರುವ ವೇಳೆ ಆಲಹಳ್ಳಿ ಬಳಿ ಎಕ್ಸಲೇಟರ್ ತೊಂದರೆ ಉಂಟಾಗಿ ರಸ್ತೆ ಬದಿ ನಿಲ್ಲಿಸಿ, ಕೆಳಗೆ ತೆರಳಿ ದುರಸ್ತಿಗೆ ಮುಂದಾಗಿದ್ದಾರೆ.
ಈ ವೇಳೆ ಆಟೋದಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ಏಕಾಏಕಿ ಕ್ಯಾಂಟರ್ ಗಾಜುಗಳನ್ನು ಲಾಂಗ್‌ನಿಂದ ಹೊಡೆದಿದ್ದಾರೆ, ಶಬ್ದ ಕೇಳಿ ಕ್ಯಾಂಟರ್ ಕೆಳಗೆ ರಿಪೇರಿ ಮಾಡುತ್ತಿದ್ದ ಮುನಿರಾಜು ಹೊರಗೆ ಬಂದಾಗ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಮುಂದಾಗಿದ್ದಾರೆ, ಈ ವೇಳೆ ತಪ್ಪಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡುವ ವೇಳೆ ಆಯ ತಪ್ಪಿ ಬಿದ್ದಿದ್ದು, ಬೆನ್ನತ್ತಿ ಬಂದ ದುಷ್ಕರ್ಮಿಗಳು ಚಾಕು, ಲಾಂಗ್‌ನಿಂದ ಗಂಭೀರವಾಗಿ ಹಲ್ಲೆ ನಡೆಸಿ, ಮೊಬೈಲ್ ಸೇರಿದಂತೆ 75 ಸಾವಿರ ಮೌಲ್ಯದ ಹಣ ದೋಚಿ ಪರಾರಿಯಾಗಿದ್ದಾರೆ.
ಈ ಘಟನೆ ಬೆನ್ನಲ್ಲೇ ಸ್ವಲ್ಪ ದೂರದಲ್ಲಿ ಮತ್ತೊಂದು ಗೂಡ್ಸ್ ವಾಹನವನ್ನು ಅಡ್ಡಗಟ್ಟಿರುವ ಇದೇ ದುಷ್ಕರ್ಮಿಗಳು ಚಾಲಕ ಸೇರಿದಂತೆ ಮೂವರ ಮೇಲೆ ದಾಳಿ ಮಾಡಿ ಹಣ, ಮೊಬೈಲ್ ದೋಚಿದ್ದರೆ, ಇದೇ ರೀತಿ ಮದುರೆ ಬಳಿ ಕೂಡ ವಾಹನಗಳ ಅಡ್ಡಗಟ್ಟಿ ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.