ಬೆಂಗಳೂರು: ಗುರುವಾರ ಬೆಳಗ್ಗಿನ ಜಾವ ದೊಡ್ಡಬಳ್ಳಾಪುರ (Doddaballapur) ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಡಿ ರೌಡಿಗಳ (Rowdy) ಗುಂಪೊಂದು ಆಟೋದಲ್ಲಿ ಬಂದು ವಾಹನ ಚಾಲಕರನ್ನು ಹೆದರಿಸಿ, ಹಣ ದೋಚಿರುವ ಘಟನೆ ವರದಿಯಾಗಿತ್ತು
ಇದಕ್ಕೂ ಮುನ್ನ ಇದೇ ಪುಡಿ ರೌಡಿಗಳ ಗುಂಪು ಬ್ಯಾಡರಹಳ್ಳಿಯ ವಾಲ್ಮೀಕಿನಗರ ಮತ್ತು ಎಪಿ ನಗರದ ಮುದ್ದಯ್ಯನಪಾಳ್ಯದಲ್ಲಿ ಕಾರ್ ಗ್ಲಾಸ್ ಒಡೆದಿದಿದ್ದು, ನಂತರ ಮಾದನಾಯಕನಹಳ್ಳಿಯ ಮಾಗಡಿ ರೋಡ್ ವ್ಯಾಪ್ತಿಯಲ್ಲಿ ಕೂಡ ವಾಹನ ಚಾಲಕರಿಗೆ ಮಾರಕಾಸ್ತ್ರ ತೋರಿಸಿ, ಬೆದರಿಸಿ ಹಣ ದೋಚಿದ್ದಾರೆ. ಲಾರಿ ಗ್ಲಾಸ್ ಒಡೆದ ದುರುಳರು ಚಾಲಕ ಮಲಗಿರುವುದನ್ನು ಗಮನಿಸಿ, ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ.
ಚಾಲಕ ಹೆದರಿ ಅವರಿಗೆ ಹಣ ಕೊಡಲು ಮುಂದಾದರೂ ಲಾಂಗ್ ಬೀಸಿ ಗಾಯಗೊಳಿಸಿದ್ದಾರೆ. ಜೊತೆಗೆ ಮೊಬೈಲ್ ಫೋನ್ ಹಾಗೂ 5 ಸಾವಿರ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಸಿಕ್ಕ ಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್ ತೋರಿಸಿ, ಬೆದರಿಸಿ ಹಣ ವಸೂಲಿ ಮಾಡಿದೆ. ಕುಡಿದ ಮತ್ತಿನಲ್ಲಿ ಸುಮಾರು 20 ವಾಹನಗಳ ಗ್ಲಾಸ್‌ಗಳನ್ನು ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅನ್ನಪೂರ್ಣೇಶ್ವರಿ ನಗರದ ಮುದ್ದಿನಪಾಳ್ಯದ ಬಳಿ ಐದಾರು ವಾಹನಗಳ ಗ್ಲಾಸ್ ಗಳನ್ನು ಒಡೆದು ಹಾಕಿದ್ದಾರೆ.
ಗುರುವಾರ ಬೆಳಗ್ಗಿನ ಜಾವ ಮೂರು ಗಂಟೆ ಸಮಯದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಆಲಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಚಾಲಕರು ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ದೋಚಿ ಪರಾರಿಯಾಗಿದೆ.
ಆಟೋದಲ್ಲಿ ಬಂದಿರುವ 6 ಮಂದಿ ದುಷ್ಕರ್ಮಿಗಳು ಎರಡು ವಾಹನಗಳ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ.
ಘಟನೆಯಲ್ಲಿ ಕೋಲಾರ ಮೂಲದ ಮುನಿರಾಜು (33 ವರ್ಷ) ಎನ್ನುವವರು ಕ್ಯಾಂಟರ್‌ನಲ್ಲಿ ನೆಲಮಂಗಲದ ದಾಸರಯ್ಯನ ಪುರದ ಮಾರುಕಟ್ಟೆ ತರಕಾರಿ ಅನ್‌ಲೋಡ್ ಮಾಡಿ ಬರುವ ವೇಳೆ ಆಲಹಳ್ಳಿ ಬಳಿ ಎಕ್ಸಲೇಟರ್ ತೊಂದರೆ ಉಂಟಾಗಿ ರಸ್ತೆ ಬದಿ ನಿಲ್ಲಿಸಿ, ಕೆಳಗೆ ತೆರಳಿ ದುರಸ್ತಿಗೆ ಮುಂದಾಗಿದ್ದಾರೆ.
ಈ ವೇಳೆ ಆಟೋದಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ಏಕಾಏಕಿ ಕ್ಯಾಂಟರ್ ಗಾಜುಗಳನ್ನು ಲಾಂಗ್‌ನಿಂದ ಹೊಡೆದಿದ್ದಾರೆ, ಶಬ್ದ ಕೇಳಿ ಕ್ಯಾಂಟರ್ ಕೆಳಗೆ ರಿಪೇರಿ ಮಾಡುತ್ತಿದ್ದ ಮುನಿರಾಜು ಹೊರಗೆ ಬಂದಾಗ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಮುಂದಾಗಿದ್ದಾರೆ, ಈ ವೇಳೆ ತಪ್ಪಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡುವ ವೇಳೆ ಆಯ ತಪ್ಪಿ ಬಿದ್ದಿದ್ದು, ಬೆನ್ನತ್ತಿ ಬಂದ ದುಷ್ಕರ್ಮಿಗಳು ಚಾಕು, ಲಾಂಗ್‌ನಿಂದ ಗಂಭೀರವಾಗಿ ಹಲ್ಲೆ ನಡೆಸಿ, ಮೊಬೈಲ್ ಸೇರಿದಂತೆ 75 ಸಾವಿರ ಮೌಲ್ಯದ ಹಣ ದೋಚಿ ಪರಾರಿಯಾಗಿದ್ದಾರೆ.
ಈ ಘಟನೆ ಬೆನ್ನಲ್ಲೇ ಸ್ವಲ್ಪ ದೂರದಲ್ಲಿ ಮತ್ತೊಂದು ಗೂಡ್ಸ್ ವಾಹನವನ್ನು ಅಡ್ಡಗಟ್ಟಿರುವ ಇದೇ ದುಷ್ಕರ್ಮಿಗಳು ಚಾಲಕ ಸೇರಿದಂತೆ ಮೂವರ ಮೇಲೆ ದಾಳಿ ಮಾಡಿ ಹಣ, ಮೊಬೈಲ್ ದೋಚಿದ್ದರೆ ಮತ್ತೆ ಮದುರೆ ಬಳಿ ಕೂಡ ವಾಹನಗಳ ಅಡ್ಡಗಟ್ಟಿ ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಘಟನೆ ಬಗ್ಗೆ ಎಪಿ ನಗರ, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ ಮತ್ತು ದೊಡ್ಡಬಳ್ಳಾಪುರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.