ಬೆಂಗಳೂರು: ಮನೆ ಕೆಲಸದ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿದ ಆರೋಪದಲ್ಲಿ (Rape case) ವಿಶೇಷ ನ್ಯಾಯಾಲಯ ವಿಧಿಸಿರುವ ಜೀವಿತಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅಲ್ಲದೇ, ವಿಚಾರಣಾ ನ್ಯಾಯಾಲಯ ವಿಧಿಸಿರುವ ಜೀವಿತಾವಧಿ ಶಿಕ್ಷೆಯ ಆದೇಶ ರದ್ದುಪಡಿಸಬೇಕು. ಪ್ರಕರಣದಿಂದ ಅರ್ಜಿದಾರರನ್ನು ಖುಲಾಸೆಗೊಳಿಸ ಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿಯಲ್ಲಿ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂಬುದಾಗಿ ದೂರು ದಾಖಲಿಸಿರುವ ಮಹಿಳೆ ತೋಟದ ಮನೆಯಲ್ಲಿದ್ದ ಸಂದರ್ಭದಲ್ಲಿ ಪೊಲೀಸರು ಅಲ್ಲಿಗೆ ಬಂದಿದ್ದರು. ಪೊಲೀಸರನ್ನು ಕಂಡು ಭಯಭೀತಳಾಗಿ ಓಡಲು ಪ್ರಯತ್ನ ಮಾಡಿದ್ದೆ. ಈ ಸಂದರ್ಭದಲ್ಲಿ ಪೊಲೀಸರು ತನ್ನನ್ನು ಎಸ್ ಐಟಿಗೆ ಕರೆತಂದು ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಅಂಶ ಸಂತ್ರಸ್ತೆಯನ್ನು ಪೊಲೀಸರು ಬೆನ್ನಟ್ಟಿ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ ಎಂಬುದು ಗೊತ್ತಾಗಲಿದೆ. 2021ರ ಜನವರಿ ತಿಂಗಳಿನಿಂದ 2022ರ ಜನವರಿ ಅಂತ್ಯದವರೆಗೂ ಬಸವನಗುಡಿಯ ಮನೆಯಲ್ಲಿ ಅತ್ಯಾಚಾರವೆಸಗಲಾಗಿದೆ. ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಜತೆಗೆ 2022ರಲ್ಲಿ ಕೆಲಸ ಬಿಟ್ಟಿರುವುದಾಗಿಯೂ ತಿಳಿಸಿದ್ದಾರೆ. ಆದರೆ, 2024ರ ಮೇ 10 ರಂದು ಅದೇ ಮನೆಗೆ ತನಿಖಾಧಿಕಾರಿಗಳು ಬಂದು ಹಾಸಿಗೆಯ ಮೇಲಿನ ಕಲೆಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಅವು ಅರ್ಜಿದಾರರದ್ದೇ ಎಂಬುದಾಗಿ ಹೇಳಿದ್ದಾರೆ. ಆದರೆ, ಸತತ ಮೂರು ವರ್ಷಗಳ ಕಾಲ ಹಾಸಿಗೆ ಮೇಲಿನ ಬಟ್ಟೆಗಳನ್ನು ಬದಲಾಯಿಸದೇ, ತೊಳೆಯದೆ ಹೇಗೆ ಹಾಕಬಹುದು ಎಂಬ ಅಂಶವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ.
ಅಲ್ಲದೇ, ತನಿಖಾಧಿಕಾರಿಗಳು 2025ರ ಮೇ 28 ರಂದು ಗನ್ನಿ ಕಡ ತೋಟದ ಮನೆಯಲ್ಲಿ ಕೊಠಡಿ ಸಂಖ್ಯೆ 2ರಲ್ಲಿದ್ದ ಸಂತ್ರಸ್ತೆಯ ಬಟ್ಟೆಗಳು ಮತ್ತು ಕೂದಲನ್ನು ಸಂಗ್ರಹಿಸಿದ್ದಾರೆ. ಆದರೆ, ಸಂತ್ರಸ್ತೆಯನ್ನು ಕರೆದೊಯ್ಯದೇ ಅವರು ಅದೇ ರೂಮಿನಲ್ಲಿ ವಾಸವಾಗಿದ್ದರು ಎಂಬುದು ತನಿಖಾಧಿಕಾರಿಗಳಿಗೆ ಹೇಗೆ ತಿಳಿದಿತ್ತು ಎಂಬ ಅಂಶವನ್ನು ವಿವರಿಸಿಲ್ಲ. ಇದೊಂದು ಸಂಶಯಕ್ಕೆ ಕಾರಣವಾಗಿದ್ದು, ತನಿಖೆಯಲ್ಲಿ ಗಂಭೀರ ಲೋಪವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮಹಿಳೆ ಕೆಲಸ ಬಿಟ್ಟು 3 ವರ್ಷ
ತೋಟದ ಮನೆಯ ಕೊಠಡಿ ಸಂಖ್ಯೆ 2ರಲ್ಲಿ ಗೋಡೌನ್ ರೀತಿಯಲ್ಲಿ ಬಳಕೆ ಮಾಡಿಕೊಳ್ಳ ಲಾಗುತ್ತಿತ್ತು. ಅದರಲ್ಲಿ ಖಾಲಿ ಪೇಂಟಿಂಗ್ ಡಬ್ಬಗಳು, ಬ್ಯಾಟರಿಗಳು, ಕಾರ್ಪೇಟ್‌ಗಳು ಮತ್ತು ಮ್ಯಾಟ್‌ಗಳನ್ನು ಹಾಕಲಾಗಿತ್ತು. ಆದರೆ, 2022ರಲ್ಲಿಯೇ ಸಂತ್ರಸ್ತೆ ಕೆಲಸ ಬಿಟ್ಟರುವುದಾಗಿ ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಕರೆದುಕೊಂಡು ಹೋಗದೆಯೇ ಮೂರು ವರ್ಷ ಬಳಿಕ ಅದೇ ಕೊಠಡಿಯಲ್ಲಿ ಬಟ್ಟೆಗಳ ಮೇಲಿನ ಕಲೆಗಳು ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಯಾವುದೇ ವ್ಯಕ್ತಿಯೂ ನಂಬುವುದಕ್ಕೆ ಸಾಧ್ಯವೇ ಇಲ್ಲ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.