ದೊಡ್ಡಬಳ್ಳಾಪುರ: ಕಾರಿನಲ್ಲಿ ಕರೆದುಕೊಂಡು ಬಂದ ವ್ಯಕ್ತಿ ನಡುರಸ್ತೆಯಲ್ಲಿಯೇ ಹಲ್ಲೆ ನಡೆಸಿ, ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಹಿಂದೂಪುರ ಮೂಲದ ಮಹಿಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಿಸಿದ್ದಾರೆ.
ಹಲ್ಲೆಗೊಳಗಾದ ಮಹಿಳೆ ಶಾನೂ ಎನ್ನಲಾಗಿದ್ದು, ಈ ಕುರಿತು ಶಿವರಾಮ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾನೂ ನೀಡಿರುವ ದೂರಿನ ಅನ್ವಯ, ಆಕೆಯನ್ನು 12 ವರ್ಷದ ಹಿಂದೆ ಆಂಧ್ರಪ್ರದೇಶದ ಪುಟ್ಟಪರ್ತಿ ಬಳಿ ಇರುವ ಮರಕುಂಟವರ ಗ್ರಾಮದ ಆಕ್ಬರ್ ಬಾಷ ಅವರಿಗೆ ಕೊಟ್ಟು ಮದುವೆ ಮಾಡಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ಆಕೆ ಮತ್ತು ಅಕೆಯ ಪತಿ ಸುಮಾರು 10 ವರ್ಷದ ಹಿಂದೆ ಕೆಲಸ ಹುಡುಕಿಕೊಂಡು ಯಲಹಂಕಕ್ಕೆ ಬಂದು, ಬಾಡಿಗೆ ಮನೆ ಮಾಡಿಕೊಂಡು ಗಾರೆ ಕೆಲಸಕ್ಕೆ ಮಾಡುತ್ತಿದ್ದರಂತೆ.
ಈ ವೇಳೆ ಅವರು ಗಾರೆ ಕೆಲಸ ಮಾಡುವ ಸಮಯದಲ್ಲಿ ಜೆಸಿಬಿ ಚಾಲನೆ ಮಾಡುವ ಮಂಡ್ಯ ಮೂಲದ ಶಿವರಾಮ ಎಂಬಾತ ಪರಿಚಯವಾಗಿದ್ದು, ಸ್ನೇಹಿತರಾಗಿದ್ದರಂತೆ. ಈಗ್ಗೆ ಸುಮಾರು 5 ವರ್ಷದ ಹಿಂದೆ ಸಂಸಾರ ಸಮೇತ ದೊಡ್ಡಬಳ್ಳಾಪುರಕ್ಕೆ ಗಂಡ ಹೆಂಡತಿ ಬಂದಿದ್ದು, ಪತಿ ಗಾರೆ ಕೆಲಸ ಮಾಡಿಕೊಂಡಿದ್ದರೆ, ಈಕೆ ಗಾರ್ಮೆಂಟ್ ಫ್ಯಾಕ್ಟರಿಗೆ ಕೆಲಸಕ್ಕೆ ತೆರಳುತ್ತಾರಂತೆ.
ಇವರ ಜೊತೆಯಲ್ಲಿ ಜೆಸಿಬಿ ಡ್ರೈವರ್ ಶಿವರಾಮ ಸಹ ಬಂದು ಅವರ ಮನೆಯಲ್ಲಿಯೇ ವಾಸವಾಗಿದ್ದು, ಕಾರ್ ಚಾಲನೆ ಮಾಡಿಕೊಂಡಿದ್ದನಂತೆ. ಅಲ್ಲದೆ ಅವರ ಮನೆಯಲ್ಲಿನ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದನಂತೆ. ಅದಕ್ಕೆ ಈ ದಂಪತಿ ಶಿವರಾಮಗೆ ಊಟ ವಸತಿ ಸೌಕರ್ಯವನ್ನು ನೋಡಿಕೊಳ್ಳುತ್ತಿದ್ದರಂತೆ.
ಬುಧವಾರ ಬೆಳಗ್ಗೆ ಆಕ್ಬರ್ ಬಾಷ ತೊಂಡೆಬಾವಿಗೆ ಗಾರೆ ಕೆಲಸಕ್ಕೆ ಹೋಗಿದ್ದು, ಫ್ಯಾಕ್ಟರಿಗೆ ರಜೆ ಇದ್ದುದರಿಂದ ಆಕೆ ಮನೆಯಲ್ಲಿಯೇ ಇದ್ದರಂತೆ. ಮಧ್ಯಾಹ್ನ 3.00 ಗಂಟೆ ಸಮಯದಲ್ಲಿ ಶಿವರಾಮ ಕಾರಿನಲ್ಲಿ ಬಂದು, ನಿಮ್ಮ ಯಜಮಾನರನ್ನು ಕರೆದುಕೊಂಡು ಬರೋಣ ಬಾ ಎಂದು ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ, ದೊಡ್ಡಬಳಾಪುರ-ಗೌರಿಬಿದನೂರು ರಸ್ತೆ ಗುಂಡಮಗೆರೆ ಕ್ರಾಸ್ ನಿಂದ ಮುಂದೆ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ. ಆಕೆಗೆ ಕೆಟ್ಟ ಪದಗಳಿಂದ ಬೈದು, ನಿನಗೆ ಮತ್ತು ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ಯಾವುದೋ ಗಂಡಸಿಗೆ ಅಕ್ರಮ ಸಂಬಂಧ ಇದೆ, ನಾನು ಇದ್ದರೂ ಸಹ ನಿನಗೆ ಬೇರೆ ಗಂಡಸು ಬೇಕೆ? ನಿನ್ನನ್ನು ಈ ದಿನ ಕೊಲೆ ಮಾಡದೇ ಬಿಡುವುದಿಲ್ಲ ಎಂದು ಹೇಳಿ, ಕೈಗಳಿಂದ ಆಕೆಯನ್ನು ಹೊಡೆದಿದ್ದಾನಂತೆ.
ಅಲ್ಲದೆ ಅಲ್ಲಿಯೇ ಬಿದ್ದಿದ್ದ ಕಡ್ಡಿಯನ್ನು ತೆಗೆದುಕೊಂಡು ಬೆನ್ನಿಗೆ ಹೊಡೆದಿದ್ದು, ಆಕೆ ತಪ್ಪಿಸಿಕೊಂಡು ರಸ್ತೆಗೆ ಬಂದು ಕೂಗಿಕೊಂಡಾಗ, ಸಾರ್ವಜನಿಕರು ಬಂದು ಆಕೆಯನ್ನು ರಕ್ಷಿಸಿ, ಆಕೆಯ ಪತಿ ಆಕ್ಬರ್ ಬಾಷ ಫೋನ್ ಮಾಡಿ ತಿಳಿಸಿದ್ದು, ಆತ ಒಂದು ಆಕೆಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಟ್ಟ ಪದಗಳಿಂದ ಬೈದು, ಕೈಗಳಿಂದ ಮತ್ತು ಕಡ್ಡಿಯಿಂದ ಹೊಡೆದು, ಕೊಲೆ ಬೆದರಿಕೆಯನ್ನು ಹಾಕಿರುವ ಶಿವರಾಮ ಮೇಲೆ ಕ್ರಮಕೈಗೊಳ್ಳುವಂತೆ ಶಾನೂ ದೂರು ನೀಡಿದ್ದಾರೆ.