ಚಿಕ್ಕಬಳ್ಳಾಪುರ: ನೋಡ ನೋಡುತ್ತಿದ್ದಂತೆ ಹೈಟೆನ್ಷನ್ ವಿದ್ಯುತ್ ತಂತಿ (Electric wire) ಹಿಡಿದ ಯುವಕ ಸಾವನಪ್ಪಿರುವ ಘಟನೆ ಹೊನ್ನೇನಹಳ್ಳಿ ಗೇಟ್ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ರೆಸ್ಟೋರೆಂಟ್ ಮುಂಬಾಗದಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ನೇಪಾಳ ಮೂಲದ 25 ವರ್ಷದ ಪದಮ್ ಬೀಸ್ಟ್ ಎಂದು ಗುರುತಿಸಲಾಗಿದೆ.
ವಿದ್ಯತ್ ಸ್ಪರ್ಶಿಸಿ ಸಾವನ್ನಪ್ಪಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಆಕಸ್ಮಿಕ ಸಾವೋ..? ಆತ್ಮಹತ್ಯೆಯೋ ? ಅನ್ನೋ ಅನುಮಾನ ವ್ಯಕ್ತವಾಗಿದೆ.
ವಿವರ
ಆತ ಕೆಲಸ ಅರಿಸಿಕೊಂಡು ನೇಪಾಳದಿಂದ ಕುಟುಂಬ ಸಮೇತ ನೂತನ ಡಾಬಾವೊಂದಕ್ಕೆ ಬಂದಿದ್ದ, ಆದರೆ ಆತನಿಗೆ ಅದೇನಾಯಿತೋ ಏನೋ ಗೊತ್ತಿಲ್ಲ, ತಾನು ಕೆಲಸ ಮಾಡುವ ಡಾಬಾ ಮುಂಭಾಗದ ಪೆಟ್ಟಿಗೆ ಅಂಗಡಿ ಮೇಲೆ ಹತ್ತಿದವನೇ, ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ಹಿಡಿದು ದಾರುಣವಾಗಿ ಸಾವನ್ನಪ್ಪಿದ್ದಾನೆ.
ಅಸಲಿಗೆ ಅಲ್ಲಿ ಆಗಿದ್ದಾದ್ರೂ ಏನು..?
ಹೀಗೆ ಸಿಸಿ ಕ್ಯಾಮೆರಾದಲ್ಲಿ ಕಾಣುತ್ತಿರುವ ದೃಶ್ಯದಲ್ಲಿ ಯುವಕನೋರ್ವ ತರಾತುರಿಯಲ್ಲಿ ಪೆಟ್ಟಿಗೆ ಅಂಗಡಿ ಮೇಲೆ ಹತ್ತಿ ಮೇಲೆ ಹಾದುಹೋಗಿದ್ದ ವಿದ್ಯುತ್ ಲೈನ್ ತಂತಿಯನ್ನ ಹಿಡಿದು ಸ್ಥಳದಲ್ಲೇ ಧಾರುಣ ಅಂತ್ಯ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ನಗರ ಹೊರವಲಯದ ಹೊನ್ನೇನಹಳ್ಳಿ ಗ್ರಾಮದ ಬಳಿ.
ಹೌದು ಹೊನ್ನೇನಹಳ್ಳಿ ಗೇಟ್ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಡಿ.ಕೆ. ಫ್ಯಾಮಿಲಿ ರೆಸ್ಟೋರೆಂಟ್ ಮುಂಬಾಗದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ನೇಪಾಳ ಮೂಲದ 25 ವರ್ಷದ ಪದಮ್ ಬೀಸ್ಟ್ ಎಂಬಾತ ಮೃತಪಟ್ಟಿದ್ದು, ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಅಂತ ತಿಳಿದುಬಂದಿದೆ.
ಇನ್ನು ಹೊನ್ನೇನಹಳ್ಳಿ ಗೇಟ್ ಬಳಿ ನೂತನವಾಗಿ ಡಿ.ಕೆ. ಫ್ಯಾಮಿಲಿ ರೆಸ್ಟೋರೆಂಟ್ ನಿರ್ಮಾಣವಾಗಿ ಇನ್ನೇನು ದೀಪಾವಳಿಗೂ ಮುನ್ನ ಇಂದು ಪೂಜೆ ಮಾಡಿ ಉದ್ಘಾಟನೆ ಮಾಡಬೇಕಿತ್ತು.
ರಾತ್ರಿಯೆಲ್ಲಾ ರೆಸ್ಟೋರೆಂಟ್ ನ್ನ ಸ್ವಚ್ಚಗೊಳಿಸಿ ತಳಿರು ತೋರಣಗಳನ್ನ ಸಿದ್ದಪಡಿಸಿಕೊಳ್ಳುತ್ತಿದ್ದರು.. ಅಷ್ಟರಲ್ಲಿ ರೆಸ್ಟೋರೆಂಟ್ ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡಲು ಬಂದಿದ್ದವ ಧಾರುಣವಾಗಿ ಸಾವನ್ನಪ್ಪಿರೋದು ರೆಸ್ಟೋರೆಂಟ್ ಮಾಲಿಕನಿಗೆ ದಿಕ್ಕುತೋಚದಂತಾಗಿ, ಗರ ಬಡಿದಂತಾಗಿದೆ.
ಒಟ್ಟಾರೆ ಅಡುಗೆ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಳ್ಳಲು ಬಂದಿದ್ದ ನೇಪಾಳಿ ಯುವಕ ವಿದ್ಯುತ್ ಶಾಕ್ ಗೆ ಬಲಿಯಾಗಿದ್ದು, ಆತ ಆಕಸ್ಮಿಕವಾಗಿ ಸಾವನ್ನಪ್ಪಿದ್ನಾ..? ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ವಿದ್ಯುತ್ ತಂತಿ ಹಿಡಿದು ಜೀವ ಬಿಟ್ನಾ..? ಅನ್ನೋದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.