ಎರ್ನಾಕುಲಂ: ಇಂದು ಭಾನುವಾರದಿಂದ ಸಂಚಾರ ಆರಂಭಿಸಲಿರುವ ‘ಬೆಂಗಳೂರು- ಎರ್ನಾಕುಲಂ ವಂದೇಭಾರತ್ (Vande Bharat) ಎಕ್ಸ್‌ಪ್ರೆಸ್’ ರೈಲು ಗಾಡಿಯು ಕರ್ನಾಟಕ, ತಮಿಳುನಾಡು ಮತ್ತು ಕೇರಳ ಮೂರು ರಾಜ್ಯಗಳ ಮಧ್ಯೆ ಸಂಪರ್ಕ ಸಾಧಿಸಲಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(KSR) ರೈಲು ನಿಲ್ದಾಣದಿಂದ ವಾರದ ಆರು ದಿನ (ಬುಧವಾರ ಹೊರತುಪಡಿಸಿ) ಸಂಚರಿಸುವ ಬೆಂಗಳೂರು-ಎರ್ನಾಕುಲಂ ವಂದೇಭಾರತ್ ಎಕ್ಸ್‌ಪ್ರೆಸ್, ಮುಂಜಾನೆ 5.10ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.50ಕ್ಕೆ ಎರ್ನಾಕುಲಂ ತಲುಪಲಿದೆ.
ಮರಳಿ ಎರ್ನಾಕುಲಂನಿಂದ ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 11ಕ್ಕೆ ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣ ತಲುಪಲಿದೆ.
ಮಾರ್ಗ ಮಧ್ಯೆ, ಕೇರಳದ ತ್ರಿಶೂರ್, ಪಾಲಕ್ಕಾಡ್, ತಮಿಳುನಾಡಿನ ಕೊಯಮತ್ತೂರು, ಈರೋಡ್, , ತಿರುಪೂರು ತಿರುಪೂರು ಮತ್ತು ಮತ ಸೇಲಂ ಹಾಗೂ ಕರ್ನಾಟಕದ ಕೃಷ್ಣರಾಜಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಬೆಂಗಳೂರು ಕೆಎಸ್‌ಆರ್ -ಎರ್ನಾಕುಲಂ ನಡುವಿನ 583 ಕಿಮೀ ಅಂತರದ ಪ್ರಯಾಣವನ್ನು 8 ಗಂಟೆ 40 ನಿಮಿಷಗಳಲ್ಲಿ ಪೂರ್ಣಗೊಳಿಸಲಿದೆ.
ಸಾಮಾನ್ಯ ವೇಗದ ರೈಲುಗಳಲ್ಲಿ ಸದ್ಯದ ಪ್ರಯಾಣಕ್ಕೆ 11 ಗಂಟೆ ತೆಗೆದುಕೊಳ್ಳುತ್ತಿದೆ. ಈ ಮಾರ್ಗದ ಅತ್ಯಂತ ವೇಗದ ರೈಲುಗಾಡಿಯಾದ ವಂದೇ ಭಾರತ್ ಎಕ್ಸ್‌ಪ್ರೆಸ್ ಬುಧವಾರ ಸಂಚರಿಸುವುದಿಲ್ಲ.
ಈ ವೇಗದ ರೈಲಿನಲ್ಲಿ ಪ್ರಯಾಣಿಕರಿಗೆ ವೈಫೈ ಸೇವೆ ಉಚಿತವಿದೆ. ಸ್ವಯಂಚಾಲಿತ ಬಾಗಿಲುಗಳಿವೆ, ಬಯೋವ್ಯಾಕ್ಯೂಮ್ ಶೌಚಾಲಯ ಸೌಲಭ್ಯವಿದೆ. ಈ ರೈಲಿನಲ್ಲಿ 2 ವರ್ಗದ ಪ್ರಯಾಣ ಸೌಲಭ್ಯವಿದೆ. ಬೆಂಗಳೂರು-ಎರ್ನಾಕುಲಂ ಮಧ್ಯೆ ಚೇರ್‌ಕಾರ್ ಪ್ರಯಾಣಕ್ಕೆ 1,095 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ ಪ್ರಯಾಣಕ್ಕೆ 2,289 ರೂ. ಟಿಕೆಟ್ ದರವಿದೆ.
ಈವರೆಗೆ ಕೇರಳ-ಕರ್ನಾಟಕ ಮಧ್ಯೆ ಮಂಗಳೂರು ಸೆಂಟ್ರಲ್ ಮತ್ತು ತಿರುವನಂತಪುರಂ ಮಾರ್ಗದಲ್ಲಿ 1 ವಂದೇಭಾರತ್ ರೈಲು ಸಂಚಾರವಿತ್ತು. ಈಗ ಎರಡೂ ರಾಜ್ಯಗಳ ಮಧ್ಯೆ 2ನೇ ವಂದೇಭಾರತ್ ಸಂಚಾರ ಸೌಲಭ್ಯ ದೊರೆತಿದೆ. ಅಲ್ಲದೇ, ಕೇರಳ ರಾಜ್ಯದಲ್ಲಿನ ವಂದೇಭಾರತ್ ಸಂಖ್ಯೆ 3ಕ್ಕೇರಿದೆ. ಕಾಸರಗೋಡು-ತಿರುವನಂತಪುರ ನಡುವೆ ಮತ್ತೊಂದು ವಂದೇಭಾರತ್ ಸಂಚರಿಸುತ್ತಿದೆ.