ಯಲಹಂಕ: ಜನ ಹಾಗೂ ಸರ್ಕಾರವನ್ನು ಪ್ರಭಾವಿಸುವಷ್ಟು ಎತ್ತರಕ್ಕೆ ಬೆಳೆದ ನಾಯಕ ರಾಜಕುಮಾರ್ (Rajakumara) ಅವರು ತಳವರ್ಗದ, ಕಾರ್ಮಿಕ ವರ್ಗದ ಸಾಂಸ್ಕೃತಿಕ ನಾಯಕರು ಆಗಿದ್ದವರು ಎಂದು ನಾಟಕಕಾರ ಹಾಗೂ ಕವಿ ಡಾ.ಕೆ.ವೈ.ನಾರಾಯಣಸ್ವಾಮಿ ಹೇಳಿದರು.
ಅವರು ಕಾಕೋಳು ಸಮೀಪದ ಅನುಬಂಧ ರೆಸಾರ್ಟ್ನಲ್ಲಿ ಭಾನುವಾರ ಹೆಸರಘಟ್ಟ ಸಾಹಿತ್ಯ ಸಹೃದಯ ವೇದಿಕೆ ಹಾಗೂ ಕೌದಿ ಪ್ರಕಾಶ ವತಿಯಿಂದ ನಡೆದ ಸಮಾರಂಭದಲ್ಲಿ ಪ್ರಗತಿಪರ ಚಿಂತಕ ಮಂಜುನಾಥ ಎಂ.ಅದ್ದೆ ಅವರ ಸಂಶೋಧನ ಕೃತಿ ‘ಬಡವರ ರಾಜಕುಮಾರ’ ಪುಸ್ತಕ ಬಿಡುಗಡೆ ಮಾತನಾಡಿದರು.
20ನೇ ಶತಮಾನದಲ್ಲಿ ಕರ್ನಾಟಕವನ್ನು ಭಾವನಾತ್ಮಕವಾಗಿ ಮತ್ತು ಅಖಂಡವಾಗಿ ಪ್ರಭಾವಿಸಿದ ವ್ಯಕ್ತಿತ್ವ ಹೊಂದಿದ್ದವರು ರಾಜಕುಮಾರ್. ತಮ್ಮ ಚಿತ್ರಗಳ ಮೂಲಕ ಬಡವರಲ್ಲಿ ಆತ್ಮವಿಶ್ವಾಸ, ಸಾಂಭಿಮಾನವನ್ನು ಜಾಗೃತಗೊಳಿಸಿದ್ದವರು. ಹಾಗೆಯೇ ಬಡವರು ತಮ್ಮ ಎತ್ತರದ ಕನಸುಗಳನ್ನು ನಿರಂತರವಾಗಿ ಉಳಿಸಿಕೊಳ್ಳುವಂತೆ ಮಾಡಿದವರು ರಾಜ್ಕುಮಾರ್.
ಇವರ ಚಿತ್ರಗಳು ಸಾಮಾಜಿಕವಾಗಿ ಮೂಡಿಸಿದ ಪ್ರಭಾವ ಮಹತ್ವದ್ದಾಗಿವೆ. ಯಜಮಾನಿಕೆ, ಸಾಮಾಜಿಕ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವಂತೆ ಮಾಡಿರುವ ರಾಜ್ ಕುಮಾರ್ ಚಿತ್ರಗಳನ್ನು ಮನರಂಜನೆಯಾಗಿಯಷ್ಟೇ ನೋಡದೆ ಸಾಮಾಜಿಕ ಪಠ್ಯವಾಗಿ ಅಧ್ಯಯನ ಮಾಡಿ ಬರೆದಿರುವ ಪುಸ್ತಕ ಬಡವರ ರಾಜಕುಮಾರ.
ಸಿನಿಮಾ ವಿಮರ್ಶೆಗೆ ಹೊಸ ಅಯಾಮ, ಹೊಸ ಸ್ಪರ್ಷವನ್ನು ಈ ಸಂಶೋಧನ ಕೃತಿ ನೀಡಿದೆ ಎಂದರು.
ಹಿರಿಯ ಲೇಖಕಿ ಡಾ.ವಸುಂಧರಾಭೂಪತಿ ಮಾತನಾಡಿ, ಕನ್ನಡ ರಂಗಭೂಮಿ, ಸಿನಿಮಾ ಎರಡನ್ನೂ ಸಂಗಮಿಸಿದ ಮಹಾನ್ ನಟ ರಾಜ್ಕುಮಾರ್. ಸಿನಿಮಾ ಜಗತ್ತಿನಲ್ಲಿ ನವರಸಗಳನ್ನು ತಮ್ಮ ಅಭಿನಯದ ಮೂಲಕ ಸಮರ್ಥವಾಗಿ ತೋರಿಸಿಕೊಟ್ಟ ರಾಜ್ಕುಮಾರ್ ಅವರು ಚಿತ್ರಗಳು ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ ಎಂದರು.
ರಾಜ್ಯ ಸರ್ಕಾರ ಜನರಿಂದ ತೆರಿಗೆ ಸಂಗ್ರಹದಲ್ಲಿ ಗ್ರಂಥಾಲಯ ಸೆಸ್ ಸಂಗ್ರಹ ಮಾಡುತ್ತಿದೆ. ಆದರೆ ಗ್ರಂಥಗಳ ಖರೀದಿಯನ್ನು ಮಾತ್ರ ಮಾಡುತ್ತಿಲ್ಲ. ವಾರ್ಷಿಕ ₹20 ಕೋಟಿಯನ್ನು ಪುಸ್ತಕ ಖರೀದಿಗೆ ಮೀಸಲಿಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾಗೂ ಪುಸ್ತಕ ಬಿಡುಗಡೆ ಮಾಡಿದ ಮಾಜಿ ರಾಜ್ಯ ಸಭಾ ಸದಸ್ಯ ಹಾಗೂ ಕವಿ ಡಾ.ಎಲ್.ಹನುಮಂತಯ್ಯ ಮಾತನಾಡಿ, ರಾಜ್ ಕುಮಾರ್ ಅವರು ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಆದರೆ ಅವರು ತಮ್ಮ ಹಾಡುಗಾರಿಕೆಗೆ ಪಡೆಯುತ್ತಿದ್ದ ಹಣವನ್ನು ಎಂದೂ ಸ್ವಂತಕ್ಕೆ ಬಳಸದೆ ಅನಾಥಾಶ್ರಮಕ್ಕೆ ನೀಡುತ್ತಿದ್ದ ಸಂಗತಿ ಬಹುತೇಕರಿಗೆ ತಿಳಿಯದಿಲ್ಲ.
ತಾವು ನಟಿಸುತ್ತಿದ್ದ ಸಿನಿಮಾಗಳಲ್ಲಿ ಸಾಮಾಜಿಕ ಮೌಲ್ಯ, ಆದರ್ಶಗಳು ಇರಬೇಕು ಎಂದು ಸದಾ ಭಾವಿಸುತ್ತಿದ್ದ ವ್ಯಕ್ತಿ ರಾಜ್ಕುಮಾರ್. ಬಡವರ ರಾಜಕುಮಾರ ಪುಸ್ತಕ ರಾಜ್ಕುಮಾರ್ ಅವರನ್ನು ಹೊಗಳಿ ಬರೆದಿರುವ ಪುಸ್ತಕ ಎಂದಷ್ಟೇ ನೋಡದೆ ಅಂದಿನ ನಮ್ಮ ನಾಡಿನ ಸಾಮಾಜಿಕ ಸ್ಥಿತಿಯನ್ನು ಕುರಿತ ಅಧ್ಯಯನದ ಕೃತಿಯಾಗಿ ಓದಬೇಕಿದೆ ಎಂದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಡವರ ರಾಜಕುಮಾರ ಪುಸ್ತಕದ ಲೇಖಕ ಮಂಜುನಾಥ ಎಂ.ಅದ್ದೆ, ಕಾಂಗ್ರೆಸ್ ಮುಖಂಡ ನಟರಾಜಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಾಜೀದ್, ಕೌದಿ ಪ್ರಕಾಶನದ ಕೆ.ಎನ್.ಮಮತಾ ಇದ್ದರು.