ಕೋಲಾರ: ತೀವ್ರ ಕುತೂಹಲ ಕೆರಳಿಸಿರುವ ಮಾಲೂರು ವಿಧಾನಸಭಾ ಕ್ಷೇತ್ರದ Malur assembly constituency) ಚುನಾವಣಾ ಮರು ಮತ ಎಣಿಕೆ ಇಂದು (ನ.11) ಮಂಗಳವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು ಇಡೀ ದೇಶದ ಚಿತ್ತ ಇತ್ತ ನೆಟ್ಟಿದೆ.
ಮತ ಎಣಿಕೆ ಪ್ರಕ್ರಿಯೆಯ ಎಲ್ಲ ಮಜಲುಗಳನ್ನು ವಿಡಿಯೊ ಚಿತ್ರೀಕರಿಸಲಾಗುತ್ತಿದ್ದು, ಪ್ರತಿ ಒಂದು ಗಂಟೆಗೆ ಒಮ್ಮೆ ಮತ ಎಣಿಕೆ ವಿವರಗಳನ್ನು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡಲಾಗುತ್ತದೆ. ಇದನ್ನು ಸಂಬಂಧಪಟ್ಟ ನ್ಯಾಯಾಧೀಶರು ಮಾತ್ರವೇ ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಸೋಮವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಸ್ಟ್ರಾಂಗ್ ರೂಂನಲ್ಲಿದ್ದ ಇವಿಎಂ ಮತ್ತು ಇವಿ ಪ್ಯಾಟ್‌ಗಳನ್ನು ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ, ಸ್ವತಂತ್ರ ಅಭ್ಯರ್ಥಿ ಹೂಡಿ ವಿಜಯಕುಮಾರ್, ಕಾಂಗ್ರೆಸ್ ಶಾಸಕ ನಂಜೇಗೌಡರ ಪರವಾಗಿ ಹಾಜರಾಗಿದ್ದ ಪುತ್ರಿ ಸುನೀಲ್‌ನಂಜೇಗೌಡ ಸಮ್ಮುಖದಲ್ಲಿ ಮತ ಎಣಿಕೆ ಕೇಂದ್ರವಾಗಿರುವ ತೋಟಗಾರಿಕಾ ಕಾಲೇಜಿಗೆ ಬಿಗಿ ಪೊಲೀಸ್ ಬಂದೋಬಸ್‌ನಲ್ಲಿ ಸ್ಥಳಾಂತರಿಸಲಾಗಿದೆ.
14 ಟೇಬಲ್: ತೋಟಗಾರಿಕಾ ಕಾಲೇಜಿನಲ್ಲಿ 14 ಟೇಬಲ್ ಅಳವಡಿಕೆ ಮಾಡಲಾಗಿದ್ದು 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಮೊದಲು ಅ ಮತಪತ್ರ, ನಂತರ ಸೇವಾ ಮತಪತ್ರದ ಎಣಿಕೆ ನಡೆಯಲಿದೆ.
ಮತ ಎಣಿಕೆ ಯಾಕೆ?
ಕಳೆದ ಬಾರಿಯ ಮಾಲೂರು ವಿಧಾನ ಸಭಾ ಕ್ಷೇತ್ರದಲ್ಲಿ 248 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥಗೌಡ ಸೋತಿದ್ದರು. 50,955 ಮತಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನಂಜೇಗೌಡ ಶಾಸಕರಾಗಿ ಆಯ್ಕೆಯಾಗಿದ್ದರು.
ಸೋತ ಅಭ್ಯರ್ಥಿ ಮಂಜುನಾಥಗೌಡ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಮರು ಮತ ಎಣಿಕೆಗೆ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಇಂದು ಮತಗಳನ್ನು ಮರು ಎಣಿಕೆ ಮಾಡಲಾಗುತ್ತಿದೆ.
ಫಲಿತಾಂಶ ಸುಪ್ರೀಂ ಕೋರ್ಟ್ ಸಲ್ಲಿಕೆ
ರಿಟರ್ನಿಂಗ್ ಅಧಿಕಾರಿಯಾಗಿ ಕೋಲಾರ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಕಾರ್ಯ ನಿರ್ವಹಿಸಲಿದ್ದು, ಮತ ಎಣಿಕೆ ನಂತರ ಫಲಿತಾಂಶವನ್ನು ಪ್ರಕಟಣೆ ಮಾಡುವುದಿಲ್ಲ, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶದ ವಿವರಗಳನ್ನಿಟ್ಟು ರಿಟರ್ನಿಂಗ್ ಅಧಿಕಾರಿ ಖುದ್ದಾಗಿ ದೆಹಲಿಗೆ ತೆರಳಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಲ್ಲಿಸಲಿದ್ದಾರೆಂದು ವರದಿಯಾಗಿದೆ.