ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ); ನಾಳೆ (ನ.22) ದೊಡ್ಡಬಳ್ಳಾಪುರ ತಾಲ್ಲೂಕಿನ ಕುಂಟನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ (Kannada Rajyotsava) ಆಚರಿಸಲಾಗುತ್ತಿದೆ.
ಆದರೆ ಕುಂಟನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ವರ್ಷಗಳಿಂದ ಧಾರ್ಮಿಕ ಭಾವನೆಗೆ ಜೋಡಿಸಿ ಗ್ರಾಮಸ್ಥರು ಆಚರಿಸುತ್ತಿರುವುದು ವ್ಯಾಪಕ ಗಮನ ಸೆಳೆದಿದೆ.
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ ಎಂಬುದು ನಿಮಗೂ ತಿಳಿದಿದೆ.
ಮೈಸೂರು ರಾಜ್ಯವು (ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.
ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಅಲ್ಲವೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕುಂಟನಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಕನ್ನಡ ರಾಜ್ಯೋತ್ಸವಕ್ಕೆ ಧಾರ್ಮಿಕ ಭಾವನೆ ಜೋಡಿಯಾಗಿದೆ.
ಹೌದು ನಾಳೆ ನವೆಂಬರ್ 22 ರಂದು ಕುಂಟನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 22 ದೇವರುಗಳ ಉತ್ಸವ ಆಯೋಜಿಸಲಾಗಿದ್ದು, ಗ್ರಾಮದಲ್ಲಿ ಹಬ್ಬದ ಸಂಭ್ರಮ ನಿರ್ಮಾಣವಾಗಿದೆ.
ನಾಳೆ ಕುಂಟನಹಳ್ಳಿ ಆಂಜನೇಯ ಸ್ವಾಮಿ, ಮೈಲಾರಲಿಂಗೇಶ್ವರ ಸ್ವಾಮಿ ಮಾಚೋಹಳ್ಳಿ, ಬೊಮ್ಮನಹಳ್ಳಿ ಆಂಜನೇಯ ಸ್ವಾಮಿ, ಲಕ್ಷ್ಮೀ ಕರಗದಾಂಬ ಸೋಮಶೆಟ್ಟಿಹಳ್ಳಿ, ಪಟೇಲಮ್ಮ ದೇವಿ ಅದ್ದಿಗಾನಹಳ್ಳಿ, ಮುತ್ಯಾಲಮ್ಮ ದೇವಿ ದೊಡ್ಡಬಳ್ಳಾಪುರ, ಅದ್ದೆ ತಿಮ್ಮರಾಯ ಸ್ವಾಮಿ, ಲಕ್ಷ್ಮೀ ನರಸಿಂಹಸ್ವಾಮಿ ಲಿಂಗಾಪುರ, ಮಹೇಶ್ವರಮ್ಮ ದೇವಿ ನೇರಳಘಟ್ಟ, ಬ್ಯಾಡರಹಳ್ಳಿ ಕೆಂಪಮ್ಮ ದೇವಿ, ಗೊರವನಹಳ್ಳಿ ಮಹಾಲಕ್ಷ್ಮಿ , ಬಿದಲೂರು ಭೈರವೇಶ್ವರ ಸ್ವಾಮಿ, ಹೊನ್ನಾಘಟ್ಟ ಶನಿಮಹಾತ್ಮ, ಕಾಡನೂರು ಚನ್ನಕೇಶವ ಸ್ವಾಮಿ, ಹೊನ್ನಾಘಟ್ಟ ಅಕ್ಕಯ್ಯಮ್ಮ, ದೊಡ್ಡಬಳ್ಳಾಪುರ ದೊಡ್ಡಮ್ಮ ದೇವಿ, ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಅಣಗಲಪುರ, ಭೈರವೇಶ್ವರ ಸ್ವಾಮಿ ಕೂಗೇನಹಳ್ಳಿ, ಎಸ್. ನಾಗೇನಹಳ್ಳಿ ಮುನೇಶ್ವರ ಸ್ವಾಮಿಯ ಉತ್ಸವ ನಡೆಯಲಿದೆ.
ಕನ್ನಡ ರಾಜ್ಯೋತ್ಸವದ ಜೊತೆ ದೇವರ ಉತ್ಸವ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದು, ಇದೇ ಪ್ರಥಮ ಬಾರಿಗೆ 22 ದೇವರುಗಳ ಉತ್ಸವ ಗ್ರಾಮಸ್ಥರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ ಎಂದು ಯುವ ಮುಖಂಡ ರಘು, ಮುರುಳಿ ಅವರು ಹರಿತಲೇಖನಿಗೆ ತಿಳಿಸಿದ್ದಾರೆ.