ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ದೇವಾಲಯಗಳಲ್ಲಿ ಕಾರ್ತಿಕ (Kartika) ಅಮಾವಾಸ್ಯೆಯ ಅಂಗವಾಗಿ ಲಕ್ಷ ದೀಪೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಸಪ್ತಮಾತೃಕಾ ಮಾರಿಯಮ್ಮ ದೇವಾಲಯ, ತೂಬಗೆರೆ ಪೇಟೆಯ ಗಣಪತಿ ದೇವಾಲಯದಲ್ಲಿ ವಿನಾಯಕ ಭಕ್ತ ಮಂಡಲಿ ವತಿಯಿಂದ ಲಕ್ಷ ದೀಪೋತ್ಸವ, ತೇರಿನ ಬೀದಿಯ ರಂಗಪ್ಪ ವೃತ್ತದ ಬಳಿಯ ಸರ್ವಶಕ್ತಿ ಮಾರಿಯಮ್ಮ ದೇವಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ, ಶ್ರೀ ವೈಕುಂಠ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯ ಕ್ರಮ ವಿಜೃಂಭಣೆಯಿಂದ ನೆರವೇರಿತು.
ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಸ್ವಾಮಿಗೆ ಹರಳುಗಳ ಅಲಂಕಾರ ಮಾಡಲಾಗಿತ್ತು.
ಘಾಟಿ ಕ್ಷೇತ್ರದಲ್ಲಿ ವಿಶೇಷ
ತಾಲೂಕಿನ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಅಮಾವಾಸ್ಯೆಯ ಅಂಗವಾಗಿ ಲಕ್ಷ ದೀಪೋತ್ಸವ ನಡೆಯಿತು.
ಇದರ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ, ದೇವರ ಉತ್ಸವ ನಡೆಸಲಾಯಿತು. ನಗರದ ಶ್ರೀ ಸಪ್ತಮಾತೃಕಾ ಮಾರಿಯಮ್ಮ ದೇವಾಲಯಗಳಲ್ಲಿ ದೇವತಾಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ನೂರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ದೀಪೋತ್ಸವದಲ್ಲಿ ಭಾಗವಹಿಸಿದ್ದ ದೃಶ್ಯ ಸಾಮಾನ್ಯವಾಗಿತ್ತು.