ದೊಡ್ಡಬಳ್ಳಾಪುರ: ರೇಪಿಯರ್ ಸೀರೆಗಳನ್ನು (Rapier Sarees) ದೊಡ್ಡಬಳ್ಳಾಪುರದಲ್ಲಿ ತಂದು ಮಾರಾಟ ಮಾಡಬಾರದು ಎಂದು ಮನವಿ ಮಾಡಿದ್ದರೂ ಮಾರಾಟ ಮಾಡುತ್ತಿರುವುದು ಪ್ರತಿರೋಧಿಸಿದ ಹಲವಾರು ನೇಕಾರರು (Weavers), ರೇಪಿಯರ್ ಮಗ್ಗಗಳ ಸೀರೆಗಳನ್ನು ಸಾಗಿಸುತ್ತಿದ್ದ ಮೂರು ವಾಹನಗಳನ್ನು ತಡೆದು ಜಿಎಸ್‌ಟಿ (GST) ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ನಗರದ ಕೊಂಗಾಡಿಯಪ್ಪ ಕಾಲೇಜು ಮುಂಭಾಗದಲ್ಲಿ ಭಾನುವಾರ ನಡೆದಿದೆ.
ದೊಡ್ಡಬಳ್ಳಾಪುರದಲ್ಲಿ ನೇಕಾರರು ತಯಾರು ಮಾಡುವ ಬಟ್ಟೆಗಳನ್ನು ಸೂರತ್ ಹಾಗೂ ಇತರೆಡೆ ರೇಪಿಯರ್ ಮಗ್ಗಗಳಲ್ಲಿ ನೇಯ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಇಲ್ಲಿನ ನೇಕಾರರು ತೀವ್ರ ನಷ್ಟ ಅನುಭವಿಸುತ್ತಿದ್ದು, ರೇಪಿಯರ್ ಸೀರೆಗಳು ದೊಡ್ಡಬಳ್ಳಾಪುರಕ್ಕೆ ಬಾರದಂತೆ ತಡೆಗಟ್ಟಬೇಕೆನ್ನುವ ಎಂದು ಪ್ರತಿಪಾದಿಸುವ ನೇಕಾರರು ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಬೆಳಗಿನಿಂದಲೇ ಸೀರೆಗಳನ್ನು ಸಾಗಾಣಿಕೆ ಮಾಡುವ ವಾಹನಗಳ ನಿಗಾ ವಹಿಸಿ, ಮೂರು ಸರಕು ಸಾಗಾಣಿಕೆ ವಾಹನಗಳಲ್ಲಿ ಸಾಗಿಸುತ್ತಿದ್ದ ಸುಮಾರು 5 ಸಾವಿರ ರೇಪಿಯರ್ ಸೀರೆಗಳನ್ನು ತಡೆದು ವಾಹನಗಳನ್ನು ಜಿಎಸ್ಟಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.
ಅಧಿಕಾರಿಗಳು ವಾಹನಗಳನ್ನು ವಶ ಪಡೆದು, ಕಾನೂನು ರೀತಿಯ ಪರಿಶೀಲನೆ ಕೈಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ನೇಕಾರರ ಮುಖಂಡರು ದೊಡ್ಡಬಳ್ಳಾಪುರದಲ್ಲಿ 25ಸಾವಿರ ಮಗ್ಗಗಳಿದ್ದು, 50 ಸಾವಿರ ಜನರು ಗುಡಿ ಕೈಗಾರಿಕೆಯಾಗಿರುವ ನೇಕಾರಿಕೆಯನ್ನು ಅವಲಂಭಿಸಿದ್ದಾರೆ.
ಸೂರತ್ ಹಾಗೂ ಬೆಳಗಾವಿಯಲ್ಲಿರುವ ಆಧುನಿಕ ತಂತ್ರಜ್ಞಾನದ ರೇಪಿಯರ್ ವಿರ್ಜೆಟ್ ಮಗ್ಗಗಳಲ್ಲಿ ಉತ್ಪಾದನೆ ಮಾಡುತ್ತಿದ್ದು, ದೊಡ್ಡಬಳ್ಳಾಪುರಕ್ಕೆ ತಂದು ಅರ್ಧ ಬೆಲೆಗೆ ಮಾರಾಟ ಮಾಡಿ ದೊಡ್ಡಬಳ್ಳಾಪುರ ನೇಕಾರಿಕೆ ಉದ್ಯಮವನ್ನು ಹಾಳು ಮಾಡುತ್ತಿದ್ದಾರೆ.
ಇದರಿಂದ ನೇಕಾರರು ಬ್ಯಾಂಕ್ಗಳ ಸಾಲ ಕಟ್ಟಲಾರದೇ, ಮನೆ ಮಠ ಮಾರಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಈ ಕಾರ್ಯವನ್ನು ನಿಲ್ಲಿಸಬೇಕು.
ನಿಮ್ಮ ಸೀರೆ ತಯಾರಿಕೆ ಇಲ್ಲಿಯೇ ಮಾಡಿ ಎಂದು ಸೀರೆಗಳನ್ನು ತರಿಸುತ್ತಿದ್ದ ಮಾಲೀಕರಿಗೆ ಮನವಿ ಮಾಡಿದರು.
ಇದು ಆರಂಭಿಕ ಮಾತ್ರ. ಇನ್ನು ಮುಂದೆ ಇದೇ ರೀತಿ ಮುಂದುವರೆದರೆ, ಮಾಲೀಕರ ಮನೆ ಮುಂದೆ ನೇಕಾರರ ಕುಟಂಬಗಳು ಧರಣಿ ಕುಳಿತು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನೇಕಾರ ಮುಖಂಡರು ಆಗ್ರಹಿಸಿದರು.