ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಕೇಂದ್ರದ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಚಿವ ಪ್ರಧಾನ್ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ ಅವರು; ಮೌಲ್ಯಾಧಾರಿತ ಶಿಕ್ಷಣಕ್ಕೆ ಬಲವಾದ ಒತ್ತು ನೀಡುವ ನಿಟ್ಟಿನಲ್ಲಿ ಭಗವದ್ಗೀತೆ ಬೋಧನೆ ಅತ್ಯಗತ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಭಾರತವು ಬಹಳ ಹಿಂದಿನಿಂದಲೂ ಸಂತರು, ಜ್ಞಾನ ಮತ್ತು ಶಾಶ್ವತ ನಾಗರಿಕ ಮೌಲ್ಯಗಳ ನಾಡು. ಸನಾತನ ಧರ್ಮವು ವಸುಧೈವ ಕುಟುಂಬ ಎಂಬ ಸಾರ್ವತ್ರಿಕ ಆದರ್ಶವನ್ನು ಎತ್ತಿಹಿಡಿಯುತ್ತದೆ. ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯು ಪರಮ ಜ್ಞಾನವಾಗಿದ್ದು, ಇದು ನಿಷ್ಕಾಮ ಕರ್ಮ ಮತ್ತು ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ಪ್ರತಿಯೊಬ್ಬರ ಕರ್ತವ್ಯವನ್ನು ನಿರ್ವಹಿಸುವ ಮಹತ್ವವನ್ನು ಒತ್ತಿ ಹೇಳುತ್ತದೆ. ಈ ಮೌಲ್ಯಗಳು ವಿಶೇಷವಾಗಿ ಪ್ರಸ್ತುತ ಜಾಗತಿಕ ಪರಿಸರದಲ್ಲಿ ಅಪಾರ ಪ್ರಸ್ತುತತೆಯನ್ನು ಹೊಂದಿವೆ ಎಂದು ಸಚಿವ ಕುಮಾರಸ್ವಾಮಿ ಅವರು ಪ್ರತಿಪಾದಿಸಿದ್ದಾರೆ.
ಇತ್ತೀಚೆಗೆ ಪ್ರಧಾನ ಮಂತ್ರಿಗಳು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಹಿಂದೂ ಧರ್ಮದ ಮೂಲ ತತ್ವಗಳನ್ನು ಎತ್ತಿಹಿಡಿದು ವಸುಧೈವ ಕುಟುಂಬ ಪರಿಕಲ್ಪನೆಯ ಬಗ್ಗೆ ಒತ್ತಿ ಹೇಳಿದರು ಮತ್ತು ಆ ಪವಿತ್ರ ಗ್ರಂಥ ಹೊಂದಿರುವ ಕಾಲಾತೀತ ಮೌಲ್ಯಗಳನ್ನು ಪುನರುಚ್ಚರಿಸಿದರು ಎಂಬುದನ್ನು ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದಲ್ಲಿ ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಇದಲ್ಲದೆ, ಶಿವಮೊಗ್ಗದಲ್ಲಿ ನಡೆದ ಗೀತಾ ಪಠಣ ಕಾರ್ಯಕ್ರಮಕ್ಕೆ ಹಾಜರಾಗುವ ಸೌಭಾಗ್ಯ ನನಗೂ ಸಿಕ್ಕಿತ್ತು. ಅದೊಂದು ಸ್ಫೂರ್ತಿದಾಯಕ ಕಾರ್ಯಕ್ರಮವಾಗಿತ್ತು. ಗೀತೆಯನ್ನು ಪಠಿಸಲು ಮತ್ತು ಅದಕ್ಕೆ ಸಂಬಂಧಿಸಿದ ಆಳವಾದ ಶಕ್ತಿ ಮತ್ತು ಭಕ್ತಿಯನ್ನು ಅನುಭವಿಸಲು ಇದು ಅದ್ಭುತ ಅವಕಾಶವನ್ನು ನೀಡಿತು ಎಂದಿರುವ ಸಚಿವ ಕುಮಾರಸ್ವಾಮಿ ಅವರು; ಈ ಸಂದರ್ಭದಲ್ಲಿ, ಹಲವಾರು ಸ್ಥಳೀಯ ನಾಯಕರು ಮತ್ತು ಪೋಷಕರು ಭಗವದ್ಗೀತೆಯ ಬೋಧನೆಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ವಿನಂತಿಸಿದರು ಎಂಬ ಅಂಶದ ಬಗ್ಗೆ ಕುಮಾರಸ್ವಾಮಿ ಅವರು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (NEP) ಮೌಲ್ಯಾಧರಿತ ಶಿಕ್ಷಣಕ್ಕೆ ಬಲವಾದ ಒತ್ತು ನೀಡುತ್ತದೆ. ಗೀತೆಯಿಂದ ಆಯ್ದ ಬೋಧನೆಗಳನ್ನು ಪರಿಚಯಿಸುವುದರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಶಕ್ತಿ, ಚಿಂತನೆಯ ಸ್ಪಷ್ಟತೆ ಮತ್ತು ವ್ಯಕ್ತಿತ್ವವನ್ನು ಬೆಳೆಸಲು ಸಹಾಯ ಮಾಡುತ್ತದೆ, ಇದರಿಂದಾಗಿ ನಮ್ಮ ಜನಸಂಖ್ಯಾ ಲಾಭಾಂಶವನ್ನು ಬಲಪಡಿಸುತ್ತದೆ ಮತ್ತು ನಮ್ಮ ಯುವಕರು ಜಾಗತಿಕವಾಗಿ ಶ್ರೇಷ್ಠರಾಗಲು ಪ್ರೇರಕವಾಗುತ್ತದೆ. ಆದ್ದರಿಂದ, ಭಗವದ್ಗೀತೆಯ ಕಾಲಾತೀತ ಮೌಲ್ಯಗಳನ್ನು ದೇಶಾದ್ಯಂತದ ವಿದ್ಯಾರ್ಥಿಗಳ ಕಲಿಕೆಯ ಚೌಕಟ್ಟಿನಲ್ಲಿ ಅರ್ಥಪೂರ್ಣವಾಗಿ ಸಂಯೋಜಿಸಲು ಈ ಪ್ರಸ್ತಾವನೆಗೆ ಸರಿಯಾದ ಪರಿಗಣನೆಯನ್ನು ನೀಡಿ ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ಶಿಕ್ಷಣ ಸಚಿವರನ್ನು ಕುಮಾರಸ್ವಾಮಿ ಅವರು ಕೋರಿದ್ದಾರೆ.
ಪುಟಿನ್ ಅವರಿಗೆ ಭಗವದ್ಗೀತೆ; ಪ್ರಧಾನಿಗಳಿಗೆ ಅಭಿನಂದನೆ
ಭಾರತ ಪ್ರವಾಸಕ್ಕೆ ಭೀತಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿನಂದಿದ್ದಾರೆ.
ರಷ್ಯಾದ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪವಿತ್ರ ಗ್ರಂಥ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿರುವುದು ಅತ್ಯಂತ ಶ್ಲಾಘನೀಯ. ಭಾರತದ ಶ್ರೇಷ್ಠ ಪರಂಪರೆ ಮತ್ತು ನಮ್ಮ ಪುರಾಣದ ಹೆಗ್ಗುರುತುಗಳನ್ನು ಮತ್ತಷ್ಟು ಎತ್ತರಕ್ಕೇರಿಸಿ ಸಾರ್ವಕಾಲಿಕಗೊಳಿಸುವ ನಿಟ್ಟಿನಲ್ಲಿ ಪ್ರಧಾನಿಗಳ ದೃಷ್ಟಿಕೋನವು ನಮಗೆಲ್ಲರಿಗೂ ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನುಕುಲದ ದಾರಿದೀಪ, ಅರಿವಿನ ಬೆಳಕಾಗಿರುವ ಭಗವದ್ಗೀತೆಯನ್ನು ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಮಾತ್ರವಲ್ಲ, ಶಿಕ್ಷಣದ ಪ್ರತೀ ಹಂತದಲ್ಲಿಯೂ ಪಠ್ಯವಾಗಬೇಕು ಎಂಬುದು ನನ್ನ ಆಶಯ. ಈ ಬಗ್ಗೆ ಅಗತ್ಯ ಕ್ರಮ ವಹಿಸುವ ಬಗ್ಗೆ ನಾನು ಕೇಂದ್ರದ ಶಿಕ್ಷಣ ಮಂತ್ರಿಗಳಾದ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ. ಹಾಗೆಯೇ ನಮ್ಮ ನೆಲದ ಅನರ್ಘ್ಯ ಸಂಪತ್ತು ಶ್ರೀ ವಾಲ್ಮೀಕಿ ವಿರಚಿತ ರಾಮಾಯಣ ಮತ್ತು ಶ್ರೀ ವ್ಯಾಸ ವಿರಚಿತ ಮಹಾಭಾರತ ಮಹಾಕಾವ್ಯಗಳನ್ನು ಮಕ್ಕಳಿಗೆ ಬೋಧನೆ ಮಾಡುವುದು ಅಗತ್ಯ ಎಂದು ಅವರು ಹೇಳಿದ್ದಾರೆ.