ದೊಡ್ಡಬಳ್ಳಾಪುರ: ಕೆಲ ದಿನಗಳಿಂದ ಸದ್ದಡಗಿದ್ದ ಸರ ಕಳ್ಳರ ಹಾವಳಿ ತಾಲೂಕಿನಲ್ಲಿನ ಮತ್ತೆ ಕೇಳಿ ಬಂದಿದ್ದು, 24 ಗಂಟೆ ಅವಧಿಯಲ್ಲಿ ದೊಡ್ಡಬಳ್ಳಾಪುರದ ಎರಡು ಕಡೆ ಮಾಂಗಲ್ಯ ಸರ (Mangalya chain) ಕಳ್ಳತನ (Theft) ನಡೆದಿರುವುದು ವರದಿಯಾಗಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿ
ದೊಡ್ಡಬಳ್ಳಾಪುರ ತಾಲ್ಲೂಕಿನ ಮದಗೊಂಡನಹಳ್ಳಿಯಲ್ಲಿ ಜಮೀನಿನಲ್ಲಿ ಜಾನುವಾರುಗಳಿಗೆ ಹುಲ್ಲು ಕುಯ್ದುಕೊಂಡು ಹೊತ್ತು ತರುವಾಗ ರೈತ ಮಹಿಳೆಯ ಅಡ್ಡಗಟ್ಟಿದ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು, ಮಹಿಳೆಯ ಮೇಲೆ ಹಲ್ಲೆ ನಡೆಸಿ ಸುಮಾರು 6 ಗ್ರಾಂ ತೂಕದ ಚಿನ್ನದ ತಾಳಿ ಹಾಗೂ ಗುಂಡನ್ನು ಕಸಿದು ಪರಾರಿಯಾಗಿದ್ದಾರೆ.
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿನ ಬೈರಸಂದ್ರ ಪಾಳ್ಯದಲ್ಲಿ ಜಮೀನಿಗೆ ಹಸು ಮೇಸಲು ತೆರಳಿದ್ದ ಮಹಿಳೆಯೋರ್ವರ ಅಡ್ಡಗಟ್ಟಿರುವ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು, ಆಕೆಯ ಕೊರಳಿನಲ್ಲಿದ್ದ ಸುಮಾರು 1 ಲಕ್ಷ 75 ಸಾವಿರ ಮೌಲ್ಯದ 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿ
ಇದೇ ತಂಡ ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಡ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವುದಾಗಿ ತಿಳಿದುಬಂದಿದೆ.