ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್. ಜಾಲಪ್ಪ ತಾಂತ್ರಿಕ ಕಾಲೇಜು (Jalappa Technical College) ವಸತಿ ಗೃಹದಲ್ಲಿ ವಾಸವಿದ್ದ ಪವನ್ ಎಂಬ ಯುವಕನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (murder) ಘಟನೆ ಕುರಿತು ನಗರ ಠಾಣೆ ಪೊಲೀಸರು ಓರ್ವ ಅಪ್ರಾಪ್ತ ಬಾಲಕ ಸೇರಿ, ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಮಲ್ಲತ್ ಹಳ್ಳಿ ನಿವಾಸಿ ಸಂದೀಪ್ ( 32 ವರ್ಷ), ಸಿದ್ದೇನಾಯಕನಹಳ್ಳಿ ನಿವಾಸಿಗಳಾದ ಉದಯ್ (23 ವರ್ಷ), ಹೇಮಂತ್ (22 ವರ್ಷ), ಮಂಜು (24 ವರ್ಷ) ಹಾಗೂ ಓರ್ವ ಅಪ್ರಾಪ್ತ ಬಾಲಕ ಎನ್ನಲಾಗಿದೆ.
ಕಳೆದ ಗುರುವಾರ ರಾತ್ರಿ 9.30 – 10 ಗಂಟೆ ನಡುವಿನ ಸಮಯದಲ್ಲಿ ದೊಡ್ಡಬಳ್ಳಾಪುರದ ಡಿಕ್ರಾಸ್ ಮತ್ತು ಟಿಬಿ ವೃತ್ತದ ನಡುವಿನ ಚರ್ಚ್ ಗೇಟ್ ಸಮೀಪ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಪವನ್ ತೆರಳುತ್ತಿದ್ದ ಆಟೋ ತಡೆದು ರಾಜ್ಯ ಹೆದ್ದಾರಿಯಲ್ಲಿಯೇ ಬರ್ಬರ ಹತ್ಯೆ ನಡೆಸಿ ಪರಾರಿಯಾಗಿದ್ದರು.
ಘಟನೆಯ ಬಳಿಕ ಕೆಆರ್ ಪುರಂನಲ್ಲಿ ತಾವು ಬಂದಿದ್ದ ಕಾರನ್ನು ನಿಲ್ಲಿಸಿ, ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮದಲ್ಲಿ ತಲೆ ಮರೆಸಿಕೊಂಡಿದ್ದರು ಎನ್ನಲಾಗಿದೆ.
ಈ ಕುರಿತಂತೆ ಆರೋಪಿಗಳನ್ನು ಬೆನ್ನತ್ತಿದ ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಮಹಿಳಾ ಠಾಣೆ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ನೇತೃತ್ವದ ಪೊಲೀಸರು, ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಆಧರಿಸಿ ಬಂಧಿಸಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಹೆಚ್ಚಿನ ವಿಚಾರಣೆಗೆ ಮೂರು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಗೆ ಪ್ರೀತಿ, ಅಕ್ರಮ ಸಂಬಂಧ, ಹತ್ಯೆ ಬೆದರಿಕೆ ಮುಂದಾದ ಕಾರಣಗಳ ಶಂಕೆಯ ಅಡಿಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬಂಧಿತ ಆರೋಪಿಗಳಿಂದ ಹತ್ಯೆಗೆ ಬಳಸಿದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.