ದೊಡ್ಡಬಳ್ಳಾಪುರ: ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಕೂಡಲೇ ಸಮಯ ಪ್ರಜ್ಞೆ ಮೇರೆದ 112 ಪೊಲೀಸ್ (112 police) ಸಿಬ್ಬಂದಿಗಳು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ಜಾನುವಾರುಗಳ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಶುಕ್ರವಾರ ಮಧ್ಯಾಹ್ನ ಹಿಂದೂಪುರದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಕಂಟೈನರ್ನಲ್ಲಿ ಅಕ್ರಮವಾಗಿ ಬೆಂಗಳೂರಿನ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ಪಾಲನಜೋಗಿಹಳ್ಳಿ ಸಮೀಪದ ಕೆರೆಯ ಬಳಿ ಕಂಟೈನರ್ ವಾಹನವನ್ನು 112 ಪೊಲೀಸ್ ಸಿಬ್ಬಂದಿ ಅಡ್ಡಗಟ್ಟಿದ್ದಾರೆ.
ಈ ವೇಳೆ ಕಂಟೈನರ್‌ನಲ್ಲಿದ್ದ ಚಾಲಕ ಸೇರಿದಂತೆ ಮೂವರು ವಾಹನ ಬಿಟ್ಟು ಪರಾರಿಯಾಗಲು ಮುಂದಾಗಿದ್ದು, ಪೊಲೀಸರು ಬೆನ್ನತಿ ಬಂಧಿಸಿದ್ದಾರೆ.
ಬಂಧಿತರನ್ನು ಬೆಂಗಳೂರಿನ ಡಿಜೆ ಹಳ್ಳಿಯ ಮೋದಿ ರಸ್ತೆ ನಿವಾಸಿಗಳಾದ ಸೈಯದ್ ರೆಹೇಮಾನ್ (28 ವರ್ಷ), ಸಲೀಂ (30 ವರ್ಷ), ಮುಬಾರಕ್ (26 ವರ್ಷ) ಹಾಗೂ ಪಿಣ್ಯ 2 ನೇ ಹಂತದ ಜೈನು (23 ವರ್ಷ) ಎಂದು ಗುರುತಿಸಲಾಗಿದೆ.
ಅಲ್ಲದೆ ಕಂಟೈನರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಸೀಮೆ ಹಸು, 5 ನಾಟಿ ಹಸು, 6 ಎತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.