ದೊಡ್ಡಬಳ್ಳಾಪುರ: ಪತ್ರಕರ್ತರ (Journalists) ಹಿತರಕ್ಷಣಾ ಕಾಯ್ದೆ ಜಾರಿ ಸೇರಿದಂತೆ ಪ್ರಮುಖ 12 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಡಿ.15 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯ ಕಾರ್ಯದರ್ಶಿ ಎಂ.ದೇವರಾಜ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಜನಪರ ಮಂಜು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ರಾಜ್ಯದ 16 ಸಾವಿರ ಪತ್ರಕರ್ತರಿಗೆ ಸರ್ಕಾರ ಉಚಿತವಾಗಿ ಸಂಚರಿಸುವುದಕ್ಕೆ ಬಸ್ ಪಾಸ್ ನೀಡಲು ನಡೆಸಿದ ಹೋರಾಟದ ಫಲವಾಗಿ ವಾರ್ತಾ ಇಲಾಖೆ ಕಠಿಣ ನಿಯಮಗಳನ್ನು ರೂಪಿಸಿದ್ದು, ತಾಲ್ಲೂಕು ಮಟ್ಟದ ಯಾವೊಬ್ಬ ಪತ್ರಕರ್ತರಿಗೂ ಬಸ್ ಪಾಸ್ ದೊರೆಯುವುದು ಗಗನ ಕುಸುಮವಾಗಿದೆ.
ಈ ನಿಟ್ಟಿನಲ್ಲಿ ಬಸ್ ಪಾಸ್‌ಗೆ ವಿಧಿಸಿರುವ ಕಠಿಣ ಷರತ್ತುಗಳನ್ನು ಸಡಿಲಿಸಬೇಕು ಎಂದು ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೇಡಿಕೆಗಳು
ಪಿಆರ್.ಜಿ.ಐ ಹಾಗೂ ಆರ್.ಎನ್.ಐ. ಹೊಂದಿರುವ ಪತ್ರಕರ್ತರಿಗೆ ವಿಕಾಸಸೌಧ, ವಿಧಾನಸೌಧಕ್ಕೆ ಪ್ರವೇಶಿಸಲು ಮುಕ್ತ ಅವಕಾಶ ನೀಡಬೇಕು.
ಜಿಲ್ಲಾ ವ್ಯಾಪ್ತಿಯಲ್ಲಿರುವ ಪತ್ರಿಕಾ ಭವನಗಳನ್ನು ಯಾವೊಂದು ಪತ್ರಿಕಾ ಸಂಘಟನೆಗಳಿಗೆ ನೀಡದೇ ಆಯಾ ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳ ಮೂಲಕ ನಿರ್ವಹಣೆಗೆ ಆದೇಶಿಸಬೇಕು.
ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 300ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಬೇಕು.
ಪತ್ರಕರ್ತರಿಗೆ ಜೀವ ವಿಮೆ ಸೌಲಭ್ಯ ಸರ್ಕಾರ ಒದಗಿಸಬೇಕು.
ಕೆಲವು ಪೊಲೀಸರಿಂದ ಪತ್ರಕರ್ತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು.
ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
ಪತ್ರಕರ್ತರು ಕರ್ತವ್ಯದ ಸಮಯದಲ್ಲಿ ಅಪಘಾತ,ಸಹಜವಾಗಿ ಮೃತಪಟ್ಟರೆ ಅವರ ಅವಲಂಬಿತರಿಗೆ 10ಲಕ್ಷ ರೂ.ಪರಿಹಾರ ನೀಡಬೇಕು.
ವಾರ, ಪಾಕ್ಷಿಕ, ಮಾಸ ಹಾಗೂ ಇನ್ನೀತರ ಪತ್ರಿಕೆಗಳ ಪ್ರತಿನಿಧಿಗಳು ಮಾಶಾಸನ ಪಡೆಯಲು ಅರ್ಹತೆ ಹೊಂದಿರುವುದಿಲ್ಲವೆಂದು ವಾರ್ತಾ ಇಲಾಖೆ ಹೊರಡಿಸಿರುವ ಅವೈಜ್ಞಾನಿಕ ನಿಬಂಧನೆ ಕೈ ಬಿಡಬೇಕು.
ಪತ್ರಕರ್ತರಿಗೆ ಉಚಿತ ಟೋಲ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಲಿದ್ದಾರೆ ಎಂದು ಮನವಿ ಮಾಡಿದ್ದಾರೆ.