
ಕೆ.ಎಂ. ಸಂತೋಷ್, ಆರೂಢಿ: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿ ಮುಚ್ಚಿರುವ ಬಿಬಿಎಂಪಿ (BBMP) ಘನ ತ್ಯಾಜ್ಯ ವಿಲೇವಾರಿ ಘಟಕ ಮತ್ತೆ ಸ್ಥಾಪಿಸಿ, ಜನರಿಗೆ ವಿಷ ನೀಡುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಘನತ್ಯಾಜ್ಯ ಘಟಕವನ್ನು ಮತ್ತೆ ಆರಂಬಿಸುವುದೇ ಆದರೆ ಸರ್ಕಾರದ ವಿರುದ್ದ ಇಲ್ಲಿನ ಜನ ದಂಗೆಯೇಳುವ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ನವ ಬೆಂಗಳೂರು ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್.ಪ್ರದೀಪ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅತ್ಯಾಧುನಿಕ ಘನತ್ಯಾಜ್ಯ ವಿಲೇವಾರಿ ಘಟಕವನ್ನು ದೊಡ್ಡಬೆಳವಂಗಲ ಹೋಬಳಿಯಲ್ಲಿ ಸ್ಥಾಪಿಸುವುದಾಗಿ ಬೆಳಗಾವಿಯಲ್ಲಿ ನಡೆದ ಅಧಿವೇಷನದಲ್ಲಿ ಹೇಳಿದ್ದಾರೆ.
ಪ್ರಕೃತಿಯ ಒಡಲಿಗೆ ವಿಷಪ್ರಾಶನ ಮಾಡಿ ಸಹಸ್ರಾರು ಜನತೆಯ ಜೀವಗಳನ್ನು ನರಕಕೂಪಕ್ಕೆ ತಳ್ಳಿದ ಗುಂಡ್ಲಹಳ್ಳಿ ಬಳಿಯ ಟೆರ್ರಾಫರ್ಮಾ ಎಂಬ ಕಸದ ಹೆಮ್ಮಾರಿಯನ್ನು ಮತ್ತೆ ನಮ್ಮ ತಾಲ್ಲೂಕಿಗೆ ಉಡುಗೊರೆಯಾಗಿ ನೀಡಲು ರಾಜ್ಯ ಸರ್ಕಾರ ಸಜ್ಜುಗೊಂಡಿದ್ದು, ಅಧಿವೇಶನದಲ್ಲಿ ರಾಜ್ಯ ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ.
ಇದೇ ಸಂದರ್ಭದಲ್ಲಿ ಸರ್ಕಾರದ ಈ ನಿರ್ಧಾರವನ್ನು ಶಾಸಕ ಧೀರಜ್ ಮುನಿರಾಜು ವಿರೋಧಿಸಿರುವ ನಿರ್ಧಾರವನ್ನು ನವ ಬೆಂಗಳೂರು ಹೋರಾಟ ಸಮಿತಿ ಸ್ವಾಗತಿಸಿದೆ.
ಟೆರ್ರಾಫರ್ಮಾ ಮುಚ್ಚುವ ವೇಳೆ ಎಂ.ಎಸ್ಜಿ.ಪಿ ಸಹ ಮಚ್ಚುವುದಾಗಿ ಭರವಸೆ ನೀಡಿದ್ದರು. ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಮತ್ತು ದೊಡ್ಡಬೆಳವಂಗಲ ಹೋಬಳಿಗಳ ಜನತೆಯ ಬದುಕಿನ ನೆಮ್ಮದಿ ಕಿತ್ತು, ಹಲವು ದಶಕಗಳಿಗಾಗುವಷ್ಟು ವಿಷವನ್ನು ಉಣಿಸಿದ್ದು, ಜನರ ಬದುಕು ಕಿತ್ತುಕೊಂಡಿದೆ ಎಂದರು.
ಬೆಂಗಳೂರಿನಲ್ಲಿಯೇ ಸ್ಥಾಪಿಸಲಿ
ಉಪಮುಖ್ಯಮಂತ್ರಿಗಳು ದಶಕದ ಹಿಂದೆ ಎಂಎಸ್ಪಿ ತ್ಯಾಜ್ಯ ನಿರ್ವಹಣಾ ಘಟಕ ಎಂಬ ಹೆಮ್ಮಾರಿ ನಮ್ಮ ತಾಲ್ಲೂಕಿಗೆ ಹೆಜ್ಜೆ ಇಡುವಾಗಲೂ ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಸಂಸ್ಕರಣೆ, ಫರ್ಟಿಲೈಜೇಷನ್ ಎಂಬಿತ್ಯಾದಿ ಹೂಗಳನ್ನು ಜನತೆಯ ಕಿವಿಗೆ ಇಟ್ಟು, ಯಾವ ನಿಯಮಗಳನ್ನೂ ಪಾಲಿಸದೇ ಕಸದ ರಾಶಿ ಹಾಕಿ ಜನರ ಆರೋಗ್ಯ ಕೆಡಿಸಿ, ಪರಿಸರ ಮಾಲಿನ್ಯ ಮಾಡಿದರು.
ಜನರಿಗೆ ಮತ್ತು ಪ್ರಕೃತಿಗೆ ಯಾವುದೇ ರೀತಿಯ ಅಪಾಯ ಇಲ್ಲ ಎಂಬುದಾದರೆ, ದಯವಿಟ್ಟು ಅಂತಹ ಒಂದು ಸಂಸ್ಕರಣಾ ಘಟಕವನ್ನು ಬೆಂಗಳೂರು ನಗರದ ಪ್ರತಿಷ್ಟಿತ ಶ್ರೀಮಂತರು ವಾಸಿಸುವ ಪ್ರದೇಶಗಳಲ್ಲಿಯೇ ಮೊದಲು ಪ್ರಾರಂಭಿಸಲಿ.
ಅಲ್ಲಿ ಯೋಜನೆ ಯಶಸ್ವಿಯಾದರೆ ಆನಂತರ ನಮ್ಮ ತಾಲ್ಲೂಕಿನಲ್ಲಿ ಮಾಡುವ ಬಗೆ, ಯೋಚಿಸಲಿ. ದಯಮಾಡಿ ಈ ನಿರ್ಧಾರವನ್ನು ಇಲ್ಲಿಗೇ ಕೈಬಿಡಬೇಕು. ಇಲ್ಲವಾದರೆ ಅನ್ನದಾತ ರೈತರು ದನಗಳ ಕೊರಳಲ್ಲಿರುವ ಹಗ್ಗ ಗೊಂತುಗಳನ್ನು ಕೈಗೆತ್ತಿಕೊಂಡು ಪ್ರತಿಭಟಿಸಲಿದ್ದಾರೆ ಎಂದರು.
ಭಕ್ತರಹಳ್ಳಿ ಗ್ರಾ.ಪಂ ಅಧ್ಯಕ್ಷ ಬಿ.ಆರ್.ಸಿದ್ದಲಿಂಗಯ್ಯ ಮಾತನಾಡಿ, ಟೆರ್ರಾಫರ್ಮಾ ಹಾಗೂ ಎಂ.ಎಸ್.ಜಿಪಿ ಕಸದ ಪರಿಣಾಮ ಸುತ್ತಮುತ್ತಲ ವಾತಾವರಣ ಕಲುಷಿತವಾಗಿದೆ. ಎರಡು ಹೋಬಳಿಗಳಿಗಷ್ಟೇ ಅಲ್ಲದೇ ತುಮಕೂರು ಭಾಗಕ್ಕೂ ಮುಟ್ಟಿ, ಕಲುಷಿತ ನೀರು ಮಾವತ್ತುರು ಕೆರೆ ಸೇರಿದೆ.
ಜನರ ಹಿತಕ್ಕೆ ಮಾರಕವಾಗಿರುವ ಸರ್ಕಾರದ ಈ ನಿರ್ಧಾರಕ್ಕೆ ಭಕ್ತರಹಳ್ಳಿ ಗ್ರಾ.ಪಂ ಸದಸ್ಯರು ಹಾಗೂ ಇಲ್ಲಿನ ರೈತರ ತೀವ್ರ ವಿರೋಧವಿದ್ದು, ಘಟಕ ಸ್ಥಾಪಿಸಿದರೆ ಜನ ದಂಗೆಯೇಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಧು.ಪಿ, ರಾಜು ನಾಯಕ್ ಹಾಜರಿದ್ದರು.