
ಕೆ.ಎಂ. ಸಂತೋಷ್, ಆರೂಢಿ, (ದೊಡ್ಡಬಳ್ಳಾಪುರ) “ಸುಮಾರು 40 ಸಾವಿರ ಕೋಟಿ ರೂಪಾಯಿಗಳನ್ನು ವಿವಿಧ ರೀತಿಯಲ್ಲಿ ಕೆರೆಗಳನ್ನು ತುಂಬಿಸಲು ಖರ್ಚು ಮಾಡಲಾಗುತ್ತಿದೆ. ಅನೇಕ ಕೆರೆಗಳನ್ನು (Lakes) ತುಂಬಿಸಲು ಸುಮಾರು 3 ಸಾವಿರ ಕೋಟಿಯನ್ನು ಇಂಧನ ಇಲಾಖೆಯಿಂದ ಖರ್ಚು ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ತಿಳಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಕೆರೆ ಸಂರಕ್ಷಣೆ ಜಾಗೃತಿ ಮತ್ತು “ನೀರಿದ್ದರೆ ನಾಳೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ವಿದ್ಯುತ್ ಸರಬರಾಜು ಮಾಡಿದ ಕಂಪನಿಗಳಿಗೆ ಸುಮಾರು ಶೇ.15 ರಷ್ಟು ಬಡ್ಡಿ ಸೇರಿಸಿ ಕೊಡಬೇಕಿದೆ. ಇದರ ಬಗ್ಗೆ ವಿಧಾನಸಭೆಯಲ್ಲಿ ಉತ್ತರ ನೀಡಬೇಕಿದೆ. ಸಿ.ಪಿ.ಯೋಗೇಶ್ವರ್ ಅವರು ಸೇರಿದಂತೆ ಒಂದಷ್ಟು ಜನ ಶಾಸಕರು ಇದರ ಬಗ್ಗೆ ಪ್ರಸ್ತಾವನೆ ಮುಂದಿಟ್ಟಿದ್ದಾರೆ” ಎಂದು ತಿಳಿಸಿದರು.
“ಅದಕ್ಕೆ ನಾನು ಪಂಪ್ ಮಾಡಿ ನೀರು ತುಂಬಿಸುವ ಕೆರೆಗಳಿಗೆ ಮೀನು ಮರಿಗಳನ್ನು ಬಿಟ್ಟು ಅದನ್ನು ಹರಾಜು ಹಾಕಿ ಅದರ ಆದಾಯದಿಂದ ವಿದ್ಯುತ್ ಬಿಲ್ ಪಾವತಿ ಮಾಡುವ ಆಲೋಚನೆಯಿದೆ. ಬರುವ ಆದಾಯದಿಂದ ಕೆರೆಗಳ ನಿರ್ವಹಣೆ ಮಾಡಬೇಕಿದೆ. ಸುಮಾರು 20 ಸಾವಿರ ಕೋಟಿ ಹಣವನ್ನು ಬೋರ್ ವೆಲ್ ಗಳಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ಖರ್ಚು ಮಾಡುತ್ತಿದೆ. ಎಷ್ಟು ನಾವು ಸಹಾಯಧನ ನೀಡಲು ಸಾಧ್ಯ. ರೈತರು 10 ಹೆಚ್ ಪಿ ಮೋಟರ್ ಹಾಕಿ ನೀರು ತೆಗೆಯುತ್ತಿದ್ದಾರೆ. 20 ಕಿಮೀ ದೂರಕ್ಕೂ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ” ಎಂದು ತಿಳಿಸಿದರು.
“ಎಚ್.ಕೆ.ಪಾಟೀಲ್ ಅವರು ನೀರಾವರಿ ಸಚಿವರಾಗಿದ್ದಾಗ ಕೆರೆ ನೀರು ಬಳಕೆದಾರರ ಸಂಘಗಳಿಗೆ ಹೊಸ ರೂಪ ನೀಡಿದರು. ಮಧ್ಯದಲ್ಲಿ ಇದು ನಿಂತು ಹೋಗಿತ್ತು. ಈಗ ನಾನು ಹಾಗೂ ಬೋಸರಾಜು ಅವರು ಸೇರಿ ಹೊಸ ರೂಪ ನೀಡಿದ್ದೇವೆ” ಎಂದರು.
“ಕೆರೆ ನೀರು ಬಳಕೆದಾರರ ಸಂಘಗಳಿಗೆ ಶಕ್ತಿ ತುಂಬಬೇಕು. ನಿಮಗೆ ಆರ್ಥಿಕ ಸಹಾಯ ಮಾಡಬೇಕಿದೆ. ನರೇಗಾ ಯೋಜನೆ ಹಾಗೂ ಇತರೇ ಯೋಜನೆಗಳ ಅಡಿ ಕೆರೆ ಹೂಳು ತೆಗೆದು, ಒತ್ತುವರಿ ತೆರವು ಮಾಡಿ ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ ಪ್ರಯತ್ನ ಮಾಡಿದೆ. ಯಾವುದೇ ಕೆರೆಗಳಾದರೂ ಈ ಸಂಘಗಳು ನಮ್ಮ ಕೆರೆಗಳು ಎಂದು ರಕ್ಷಣೆ ಮಾಡಬೇಕು. ರಾಜ್ಯದಲ್ಲಿ 30 ಲಕ್ಷ ಬೋರ್ ವೆಲ್ ಗಳಿವೆ. ಇದರಿಂದ ಅಂತರ್ಜಲಕ್ಕೆ ಹೊಡೆತವಾಗುತ್ತಿದೆ. ಇದು ತಪ್ಪಬೇಕು ಎಂದರೆ ಕೆರೆಗಳಿಗೆ ನೀರು ತುಂಬಬೇಕು. ರಕ್ಷಣೆ ಮಾಡಬೇಕು” ಎಂದು ಹೇಳಿದರು.
“ಕೆರೆಗಳ ರಕ್ಷಣೆಗೆ ಬಳಕೆದಾರರ ಸಂಘ ನೀಡಿರುವ ಮನವಿಗಳನ್ನು ನಾವು ಪರಿಗಣಿಸುತ್ತೇವೆ. ಅನುದಾನವನ್ನು ಹೇಗೆ ಹೆಚ್ಚಿಗೆ ಕೊಡಬಹುದು ಎಂದು ಚಿಂತಿಸುತ್ತೇವೆ. ನಿಮ್ಮ ಪರಪಾವಗಿ ನಾವಿದ್ದೇವೆ. ನೀವುಗಳು ಸ್ವಾರ್ಥವನ್ನು ಬಿಟ್ಟು ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
“ಕೆರೆ ನೀರಿನಲ್ಲಿ ತೇಲುವ ಸೋಲಾರ್ ಪ್ಲಾಂಟ್ ಗಳನ್ನು ಮಾಡುವ ಆಲೋಚನೆಯನ್ನು ಬೋಸರಾಜು ಅವರು ಮಾಡಿದ್ದಾರೆ. ನಾನು ಇದನ್ನು ಪ್ರಯತ್ನ ನಡೆಸಿದೆ. ಆದರೆ ಸುಲಭದ ಕೆಲಸವಲ್ಲ. ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ, ನಮ್ಮ ಇಲಾಖೆಗೆ ಸೇರಿದ ಕೆರೆಗಳನ್ನು ನಾವೆಲ್ಲರೂ ಸೇರಿ ಸಮಗ್ರವಾಗಿ ಉಳಿಸುವ ಆಲೋಚನೆ ಮಾಡುತ್ತಿದ್ದೇವೆ.
“ಕಾಲುವೆಗಳ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಅದಕ್ಕೆ ಹೊಸ ಕಾನೂನು ತಂದಿದ್ದೇವೆ. ಏಕೆಂದರೆ ಅನೇಕ ರೈತರಿಗೆ ನೀರೆ ಸಿಗುತ್ತಿಲ್ಲ. ಎತ್ತಿನಹೊಳೆ ಯೋಜನೆ ಮೂಲಕ ಬಯಲುಸೀಮೆಗೆ ನೀರು ತರಲಾಗುತ್ತಿದೆ. ಇದಕ್ಕೆ ಈಗಾಗಲೇ 20 ಸಾವಿರ ಕೋಟಿ ಖರ್ಚಾಗಿದೆ. ಇನ್ನು ಎಷ್ಟು ಕೋಟಿ ಖರ್ಚಾಗಲಿದೆ ಎಂಬುದು ಗೊತ್ತಿಲ್ಲ. ಮಳೆಗಾಲದಲ್ಲಿ ನೀರು ತೆಗೆದು ದೊಡ್ಡ ಪ್ರಯೋಗ ಮಾಡಿದ್ದೇವೆ” ಎಂದರು.
“ಎಲ್ಲರಿಗಿಂತ ಕೋಲಾರ, ಚಿಕ್ಕಬಳ್ಳಾಪುರ ಭಾಗದವರಿಗೆ ನೀರಿನ ಮಹತ್ವ ತಿಳಿದಿದೆ. ಬೋರ್ ವೆಲ್ ನೀರು ಬಳಸಿ ತರಕಾರಿ, ಹಣ್ಣುಗಳನ್ನು ಬೆಳೆಯಿತ್ತಿದ್ದಾರೆ, ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. 48,848 ಕೆರೆಗಳನ್ನು ನಾವುಗಳು ಹೇಗೆ ರಕ್ಷಣೆ ಮಾಡಬೇಕು ಎಂಬುದೇ ನಮ್ಮೆಲ್ಲರ ಹೊಣೆ. ಕೆರೆಗಳನ್ನು ಉಳಿಸುವುದು ಮಧ್ಯಮ, ಸಣ್ಣ, ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಜವಾಬ್ದಾರಿಯಾಗಿದೆ” ಎಂದು ತಿಳಿಸಿದರು.
ಕೇಂದ್ರದ ಇಕ್ಕಳದಲ್ಲಿ ಸಿಲುಕಿದ್ದೇವೆ
ಕಾವೇರಿ, ಮಹದಾಯಿ, ತುಂಗಭದ್ರಾ, ಕೃಷ್ಣಾ ಹೀಗೆ ಹಲವಾರು ಹೋರಾಟಗಳನ್ನು ನಾವು ಮಾಡುತ್ತಿದ್ದೇವೆ. ಭದ್ರಾ ಮೇಲ್ದಂಡೆ, ಕೃಷ್ಣಾ, ಮಹದಾಯಿ ಯೋಜನೆಯಡಿ ನಾವು ಕೇಂದ್ರ ಸರ್ಕಾರದ ಇಕ್ಕಳದಲ್ಲಿ ಸಿಲುಕಿ ಕೊಂಡಿದ್ದೇವೆ. ಆಲಮಟ್ಟಿ ಎತ್ತರ ಹೆಚ್ಚಳದ ಬಗ್ಗೆ ಅಧಿಸೂಚನೆ ಹೊರಡಿಸಬೇಕು. ಮಹದಾಯಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಬೇಕು. ಭದ್ರಾ ಮೇಲ್ದಂಡೆಗೆ ಕೇಂದ್ರ ಹಣ ನೀಡಬೇಕಿದೆ.
ತುಂಗಭದ್ರಾ ಯೋಜನೆಯಡಿ ನಾವು ನಮ್ಮ ಪಾಲಿನ ನೀರನ್ನು ಸಮತೋಲಿತ ಜಲಾಶಯ ನಿರ್ಮಾಣ ಮಾಡಿ ಅಥವಾ ಪಂಪ್ ಮಾಡಿ ಬಳಸಿಕೊಳ್ಳಬೇಕಿದೆ. ಇದಕ್ಕೆ ಆಂದ್ರ, ತೆಲಂಗಾಣ ಒಪ್ಪಿಗೆ ಸಿಗಬೇಕು. ಅವರುಗಳು ನೀರು ಸಿಗುತ್ತಿದೆ ಎಂದು ಸುಮ್ಮನಿದ್ದಾರೆ ಎಂದು ವಿವರಿಸಿದರು.
“ನಾನು ಸಹ ನೀರಿನ ವಿವಾದಗಳ ಕುರಿತು ಚರ್ಚೆ ನಡೆಸುವ ನೀರಿನ ಹೆಜ್ಜೆ ಪುಸ್ತಕ ಬರೆದಿದ್ದೇನೆ. ನೀರು ಮತ್ತು ಹಾಲಿನ ಬೆಲೆ ಒಂದೇ ಮಟ್ಟಕ್ಕೆ ಬಂದಿದೆ. ನಮಗೆ ನೀರೆ ಸರ್ವಸ್ವ, ಜೀವ ಎಲ್ಲವು” ಎಂದು ತಿಳಿಸಿದರು.