
ದೆಹಲಿ: ಶ್ರೀಮಂತರು ತಮಗೆ ಅನುಕೂಲವಾದಾಗ ದೇವಸ್ಥಾನಕ್ಕೆ ಬಂದು ಹಣ ಪಾವತಿಸಿ ವಿಶೇಷ ಪೂಜೆ ಮಾಡಿಸುತ್ತಿರುವುದರಿಂದ ದೇವರಿಗೆ ವಿಶ್ರಾಂತಿಯೇ ಇಲ್ಲವಾಗಿದೆ, ದೇವರ ಶೋಷಣೆ ಆಗುತ್ತಿದೆ ಎಂದು ಸುಪ್ರೀಂಕೋರ್ಟ್ (Supreme Court) ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಶ್ರೀಕೃಷ್ಣನ ಆರಾಧನಾ ಸ್ಥಳವಾದ ಬಂಕೆ ಬಿಹಾರಿ ಬಾಬಾ ದೇಗುಲದಲ್ಲಿ ನ್ಯಾಯಾಲಯ ರಚಿಸಿದ್ದ ಸಮಿತಿಯೇ ನಿಗದಿಪಡಿಸಿದ್ದ ‘ದೇವರ ದರ್ಶನ ಸಮಯ’ಕ್ಕೆ ಮತ್ತು ದೇಗುಲದಲ್ಲಿನ ಹೊಸ ಪದ್ದತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ. ಜೋಯ್‌ಮಲ್ಯ ಬಾಗ್ನಿ ಮತ್ತು ನ್ಯಾ.ವಿಪುಲ್ ಎಂ.ಪಾಮಚೋಲಿ ಅವರ ತ್ರಿಸದಸ್ಯ ಪೀಠವು, ದೇವರಿಗೂ ವಿಶ್ರಾಂತಿ ಕೊಡಿ ಎಂದು ಸೂಚ್ಯವಾಗಿ ಹೇಳಿದೆ.
ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ದೇಗುಲ ನಿರ್ವಹಣಾ ಸಮಿತಿ ಮತ್ತು ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ, ಮುಂದಿನ ವಿಚಾರಣೆ ಜನವರಿ ಮೊದಲ ವಾರಕ್ಕೆ ನಿಗದಿಪಡಿಸಿದೆ.