
ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್. ಜಾಲಪ್ಪ ತಾಂತ್ರಿಕ ಕಾಲೇಜು (Jalappa Technical College) ವಸತಿ ಗೃಹದಲ್ಲಿ ವಾಸವಿದ್ದ ಪವನ್ ಎಂಬ ಯುವಕನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (murder) ಘಟನೆ ಕುರಿತು, ನಗರ ಠಾಣೆ ಪೊಲೀಸರು ಬಂಧಿಸಿದ್ದ ಓರ್ವ ಬಾಲಕನನ್ನು ದೇವನಹಳ್ಳಿ ನಿಗಾ ಘಟಕಕ್ಕೆ, ಉಳಿದ ನಾಲ್ವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಬಂಧಿತ ಆರೋಪಿಗಳನ್ನು ಮಲ್ಲತ್ ಹಳ್ಳಿ ನಿವಾಸಿ ಸಂದೀಪ್ ( 32 ವರ್ಷ), ಸಿದ್ದೇನಾಯಕನಹಳ್ಳಿ ನಿವಾಸಿಗಳಾದ ಉದಯ್ (23 ವರ್ಷ), ಹೇಮಂತ್ (22 ವರ್ಷ), ಮಂಜು (24 ವರ್ಷ) ಹಾಗೂ ಓರ್ವ ಅಪ್ರಾಪ್ತ ಬಾಲಕ.
ಕಳೆದ ಡಿ.4 ರಂದು ರಾತ್ರಿ 9.30 – 10 ಗಂಟೆ ನಡುವಿನ ಸಮಯದಲ್ಲಿ ದೊಡ್ಡಬಳ್ಳಾಪುರದ ಡಿಕ್ರಾಸ್ ಮತ್ತು ಟಿಬಿ ವೃತ್ತದ ನಡುವಿನ ಚರ್ಚ್ ಗೇಟ್ ಸಮೀಪ ಕಾರಿನಲ್ಲಿ ಬಂದ ಈ ಆರೋಪಿಗಳು, ಪವನ್ ತೆರಳುತ್ತಿದ್ದ ಆಟೋ ತಡೆದು ರಾಜ್ಯ ಹೆದ್ದಾರಿಯಲ್ಲಿಯೇ ಬರ್ಬರ ಹತ್ಯೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಕೆಆರ್ ಪುರಂನಲ್ಲಿ ತಾವು ಬಂದಿದ್ದ ಕಾರನ್ನು ನಿಲ್ಲಿಸಿ, ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮದಲ್ಲಿ ತಲೆ ಮರೆಸಿಕೊಂಡಿದ್ದರು ಎನ್ನಲಾಗಿದೆ.
ಈ ಕುರಿತಂತೆ ಆರೋಪಿಗಳನ್ನು ಬೆನ್ನತ್ತಿದ ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಮಹಿಳಾ ಠಾಣೆ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ನೇತೃತ್ವದ ಪೊಲೀಸರು, ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಆಧರಿಸಿ ಬಂಧಿಸಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಹೆಚ್ಚಿನ ವಿಚಾರಣೆಗೆ ಪೊಲೀಸರ ವಶಕ್ಕೆ ನೀಡಿದ್ದರು.
ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಗಳು ಕೃತ್ಯಕ್ಕೆ ಬಳಸಿ ಬೂದಗೆರೆ ಬಳಿ ಎಸೆದಿದ್ದ ಎರಡು ಲಾಂಗ್, ಒಂದು ಮಚ್ಚು ಹಾಗೂ ಒಂದು ಚಾಕು ಅನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ 4 ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಗೂ ಅಪ್ರಪ್ತ ಬಾಲಕನನ್ನು ದೇವನಹಳ್ಳಿಯ ಅಪ್ರಾಪ್ತ ಆರೋಪಿಗಳ ನಿಗಾ ಘಟಕದ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.